ಸೌತಾಂಪ್ಟನ್, ಜೂ 5 (Daijiworld News/SM): ನಿರೀಕ್ಷೆಯಂತೆ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದ್ದು, ದಕ್ಷಿಣ ಆಫ್ರಿಕಾ ತಂಡ ಹ್ಯಾಟ್ರಿಕ್ ಸೋಲಿನ ಮೂಲಕ ಸಂಕಷ್ಟದಲ್ಲಿದೆ.
ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಹರಿಣಗಳ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿ 2019ರ ವರ್ಲ್ಡ್ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಭಾರತದ ಮಾರಕ ದಾಳಿಗೆ ತತ್ತರಿಸಿದ ದ. ಆಫ್ರಿಕಾ ತಂಡ 24 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ಕಂಡ ದ. ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 227 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಟೀಂ ಇಂಡಿಯಾದ ಪರ ಯುಜುವೇಂದ್ರ ಚಾಹಲ್ 51 ರನ್ ಗಳನ್ನು ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ತಲಾ 2 ವಿಕೆಟ್ ಗಳನ್ನು ಉರುಳಿಸಿದರು. ಕುಲದೀಪ್ ಯಾದವ್ 1 ವಿಕೆಟ್ ಉರುಳಿಸಿದರು.
ದ.ಆಫ್ರಿಕಾ ನೀಡಿದ 228 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಶಾಕ್ ನೀಡಿದ ಕಗಿಸೋ ರಬಾಡಾ 5.1 ನೇ ಓವರ್ನಲ್ಲಿ ಶಿಖರ್ ಧವನ್ ವಿಕೆಟ್ ಕಬಳಿಸಿದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಕೂಡ ಬಹಳ ಹೊತ್ತು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಕೇವಲ 18 ರನ್ ಗಳಿಸಿರುವಾಗ ಆಂಡೈಲ್ ಫೆಹ್ಲುಕ್ವಾಯೋ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಗೆ ಕ್ಯಾಚ್ ನೀಡಿ ಫೆವೀಲಿಯನ್ ನತ್ತ ಹೆಜ್ಜೆ ಹಾಕಿದರು.
ನಾಯಕ ಕೊಹ್ಲಿ ಔಟ್ ಆದ ನಂತರ ಕ್ರೀಸ್ಗಿಳಿದ ಕನ್ನಡಿಗ ರಾಹುಲ್ ಕೆಲ ಹೊತ್ತು ಉತ್ತಮವಾಗಿ ಬ್ಯಾಟ್ ಬೀಸಿ ತಂಡಕ್ಕೆ ಆಸೆರೆಯಾದರು. 26 ರನ್ಗಳಿಸಿರುವಾಗ ರಬಾಡಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ಟೀಂ ಇಂಡಿಯಾದ ವಿಕೆಟ್ ಬೀಳುತ್ತಲೇ ಇದ್ದರೆ ಇತ್ತ ತಾಳ್ಮೆಯಿಂದ ಬ್ಯಾಟ್ ಬೀಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ತನ್ನ 23 ನೇ ಶತಕ ಪೂರೈಸಿದರು.
ಇನ್ನು ಕನ್ನಡಿಗ ರಾಹುಲ್ ಔಟ್ ಆದ ಬಳಿಕ ಕಣಕ್ಕಿಳಿದ ಮಹೇಂದ್ರಸಿಂಗ್ ಧೋನಿ, ರೋಹಿತ್ ಜೊತೆ ಸೇರಿಕೊಂಡು ತಂಡಕ್ಕೆ ಆಸರೆಯಾದರು. ಹಾಗೂ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದು ನಿಲ್ಲಿಸಿದರು. ಅಂತಿಮವಾಗಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನ ಗೆಲುವಿನ ದಡ ಸೇರಿಸಿದರು.
ಟೀಂ ಇಂಡಿಯಾಕ್ಕೆ ನೆರವಾದ ರೋಹಿತ್
ಭಾರತ ತಂಡ ಪರ ರೋಹಿತ್ ಶರ್ಮಾ ತಾಳ್ಮೆಯ ಆಟವನ್ನಾಡಿ ಶತಕ ಪೂರೈಸಿ ಪಂದ್ಯದ ಕೊನೇ ತನಕ ಅಜೇಯರಾಗಿ ಉಳಿದರು. ೧೪೪ ಎಸೆತಗಳನ್ನು ಎದುರಿಸಿದ ರೋಹಿತ್ 13 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ 122 ರನ್ ಕಳೆಹಾಕಿದರು. ಆರಂಭದಿಂದಲೂ ನಿಧಾನಗತಿಯ ಹಾಗೂ ತಾಳ್ಮೆಯ ಆಟವನ್ನಾಡಿದ ರೋಹಿತ್ ತಂಡವನ್ನು ಗೆಲುವಿನ ದಡ ಸೇರಿಸಿದರು.