ಲಂಡನ್, ಜೂ 8: (Daijiworld News/SM): ಕ್ರಿಕೆಟ್ ಪಂದ್ಯದಲ್ಲಿ ಅಂಪಾಯರ್ಸ್ ಗಳು ಕೈಗೊಳ್ಳುವ ನಿರ್ಣಯ ಅಂತಿಮವಾಗಿರುತ್ತದೆ. ಇಂತಹ ಸಂದರ್ಭ ಕೆಲವೊಂದು ಬಾರಿ ಅರಿಯದೆ ತಪ್ಪು ನಿರ್ಧಾರಗಳು ಪ್ರಕಟಗೊಳ್ಳುತ್ತವೆ. ಇಂತಹ ತಪ್ಪು ನಿರ್ಧಾರಗಳು ಒಂದು ತಂಡದ ಫಲಿತಾಂಶಕ್ಕೆ ಏಟು ಬಿದ್ದರೆ ಮತ್ತೊಂದಕ್ಕೆ ಆನೆ ಬಲದಂತಾಗುತ್ತದೆ. ಈ ಬಾರೀಯ ವಿಶ್ವಕಪ್ ಪಂದ್ಯಗಳು ಇದರಿಂದ ಹೊರತಾಗಿಲ್ಲ.
ಪ್ರತಿಷ್ಟಿತ ಏಕದಿನ ವಿಶ್ವಕಪ್ ಪಂದ್ಯಾವಳಿಯ ಜೂನ್ ೬ರ ಗುರುವಾರದ ಪಂದ್ಯ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪಂದ್ಯದಲ್ಲಿ ಅಂಪಾಯರ್ಸ್ ಗಳು ಕೈಗೊಂಡ ಹಲವು ತಪ್ಪು ನಿರ್ಧಾರಗಳು ಟೀಕೆಗೆ ಗುರಿಯಾಗಿವೆ. ಸರಿ ತಪ್ಪುಗಳನ್ನು ನಿರ್ಣಯ ಮಾಡುವ ಅಂಪಾಯರ್ಸ್ ಹಲವಾರು ತಪ್ಪುಗಳನ್ನು ಮಾಡಿದರೆ ಹೇಗೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಈ ಎಡವಟ್ಟು ನಡೆದಿದೆ. ವಿಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಅಂಪಾಯರ್ ಎರಡೆರಡು ಸಲ ಕೆಟ್ಟ ತೀರ್ಪು ನೀಡಿದರು. ಎರಡೂ ಸಲ ಗೇಲ್ ಡಿಆರ್ ಎಸ್ ಅಪೀಲ್ ಮಾಡಿದರು. ಎರಡೂ ಬಾರಿಯೂ ಥರ್ಡ್ ಅಂಪಾಯರ್, ಆನ್ ಫೀಲ್ಡ್ ಅಂಪಾಯರ್ ತೀರ್ಪಿಗೆ ವಿರುದ್ಧವಾಗಿಯೇ ತೀರ್ಪು ನೀಡಿದರು.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ ನ ಐದನೇ ಎಸೆತಕ್ಕೆ ಮತ್ತೆ ಲೆಗ್ ಬಿಫೋರ್ ವಿಕೆಟ್ ಗೆ ಮನವಿ ಮಾಡಲಾಯಿತು. ಮತ್ತದೇ ಕಥೆ. ಅಂಪಾಯರ್ ಯಥಾವತ್ತಾಗಿ ಔಟೆಂದು ಕೈ ಮೇಲಕ್ಕೆತ್ತಿದರು. ಗೇಲ್ ಮತ್ತೆ ಡಿಆರ್ ಎಸ್ ಮನವಿ ಮಾಡಿದರು. ಆದರೆ ಈ ಬಾರಿ ‘ಅಂಪಾಯರ್ಸ್ ಕಾಲ್’ ಎಂಬ ತೀರ್ಪು ಬಂದ ಕಾರಣ ಗೇಲ್ ಔಟಾಗಬೇಕಾಯಿತು. ಆದರೆ ಗೇಲ್ ಔಟಾದ ಎಸೆತದ ಹಿಂದಿನ ಎಸೆತ ನೋ ಬಾಲ್ ಆಗಿತ್ತು.
ಸ್ಟಾರ್ಕ್ ಬಾಲ್ ಹಾಕುವಾಗ ಬೌಲಿಂಗ್ ಕ್ರೀಸ್ ದಾಟಿ ಎದುರು ಕಾಲು ಇಟ್ಟಿದ್ದರು. ಆದರೆ ಇದನ್ನು ಅಂಪಾಯರ್ ಗಮನಿಸಲೇ ಇಲ್ಲ. ಈ ಬಾಲ್ ನೋ ಬಾಲ್ ಆಗಿದ್ದರೆ ಅದರ ಮುಂದಿನ ಎಸೆತ ಫ್ರೀ ಹಿಟ್ ಆಗುತ್ತಿತ್ತು. ಆಗ ಇಂತಹ ಕೆಟ್ಟ ನಿರ್ಧಾರಕ್ಕೆ ಅವಕಾಶ ಇರುತ್ತಿರಲಿಲ್ಲ.
ಇಂತಹ ಕೆಲವೊಂದು ತಪ್ಪು ನಿರ್ಧಾರಗಳು ಹಲವು ಪಂದ್ಯಗಳಲ್ಲಿ ವೀಕ್ಷಕರು ಗಮನಿಸುತ್ತಾರೆ. ಅಂಪಾಯರ್ಸ್ ಗಳಿಗೆ ಶಾಪ ಹಾಕುತ್ತಾರೆ. ಆದರೆ, ಅವರ ನಿರ್ಧಾರ ಮಾತ್ರ ಅಂತಿಮವಾಗಿರುತ್ತದೆ. ಒಂದೊಮ್ಮೆ ರೋಚಕ ಪಂದ್ಯದಲ್ಲಿ ಇಂತಹ ತಪ್ಪು ನಿರ್ಧಾರಗಳನ್ನು ಅಂಪಾಯರ್ಸ್ ಗಳು ನೀಡಿದ್ದೇ ಆದಲ್ಲಿ ಆ ತಂಡಕ್ಕೆ ಅನ್ಯಾಯವೇ ಮಾಡಿದಂತೆ. ಹಲವು ಬ್ಯಾಟ್ಸ್ ಮನ್ ಗಳು ಹಾಗೂ ಬೌಲರ್ಸ್ ಗಳಿಗೆ ಇಂತಹ ಕೆಟ್ಟ ಅನುಭವಗಳಾಗಿವೆ. ಭಾರತೀಯ ಆಟಗಾರರೂ ಕೂಡ ಹಲವು ಬಾರಿ ಇಂತರ ಕೊಟ್ಟ ನಿರ್ಧಾರಗಳಿಗೆ ಬಲಿಯಾಗಿದ್ದಾರೆ.
ಇನ್ನು ಈ ಬಾರಿಯ ವಿಶ್ವಕಪ್ ಹಲವು ತಂಡಗಳಿಗೆ ಪ್ರತಿಷ್ಟೆಯಾಗಿದೆ. ಆದುದರಿಂದ ಮುಂದಿನ ಪಂದ್ಯಗಳಲ್ಲಿ ಅಂಪಾಯರ್ಸ್ ಗಳು ಇಂತಹ ಕೊಟ್ಟ ನಿರ್ಧಾರಗಳಿಂದ ದೂರವಿರಲಿ ಎಂಬುವುದು ಅಭಿಮಾನಿಗಳ ಮಾತಾಗಿದೆ.