ದುಬೈ, ಜೂ 8: (Daijiworld News/SM): ಭಾರತೀಯ ಯೋಧರ ಬಲಿದಾನದ ಪ್ರತೀಕವಾಗಿ ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಕೀಪಿಂಗ್ ಗ್ಲೌಸ್ ಮೇಲೆ ಭಾರತೀಯ ಸೇನೆಯ ಚಿಹ್ನೆ ಬಳಿಸಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ. ಇದಕ್ಕೆ ದೇಶ ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಐಸಿಸಿ ಬ್ಯಾಡ್ಜ್ ತೆಗೆಯುವಂತೆ ಧೋನಿಗೆ ಹಾಗೂ ಬಿಸಿಸಿಐಗೆ ಸೂಚನೆ ನೀಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಧೋನಿಯ ಕೀಪಿಂಗ್ ಗ್ಲೌಸ್ ಮೇಲಿನ ಚಿಹ್ನೆಯನ್ನು ತೆಗೆಯುಂತೆ ಮನವಿ ಮಾಡಿತ್ತು. ಆದರೆ ಭಾರತೀಯರು ಧೋನಿ ಕೆಲಸಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಿಸಿಸಿಐ ಕೂಡ ಧೋನಿ ಪರವಾಗಿಯೇ ಬ್ಯಾಟ್ ಬೀಸಿತ್ತು.
ಆದರೆ ಶುಕ್ರವಾರದಂದು ಬಿಸಿಸಿಐ ಮತ್ತೊಮ್ಮೆ ಐಸಿಸಿಗೆ ಧೋನಿ ಅವರು ಬಲಿದಾನ ಬ್ಯಾಡ್ಜ್ ಬಳಸಲು ಅವಕಾಶವನ್ನು ನೀಡುವಂತೆ ಮನವಿ ಮಾಡಿದೆ. ಆದರೆ ಐಸಿಸಿ ಮಾತ್ರ ಇದು ನಿಯಮಗಳಿಗೆ ವಿರುದ್ಧವಾಗಿದ್ದು ಇನ್ನು ಬ್ಯಾಡ್ಜ್ ಧರಿಸುವಂತಿಲ್ಲ ಎಂದು ಆದೇಶ ಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಈ ಗ್ಲೌಸ್ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು. ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯನ್ನು ಪಡೆದಿದ್ದರು. ಅಲ್ಲದೆ ಭಾರತೀಯ ಸೇನೆಯ ಮೇಲೆ ಅಪಾರ ಅಭಿಮಾನ ಹೊಂದಿರುವ ಅವರು, ನಿವೃತ್ತಿ ಬಳಿಕ ಸೇನೆ ಸೇರುವ ಇಂಗಿತವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒತ್ತಾಯದ ಮೇರೆಗೆ ಐಸಿಸಿ ಈ ನಿರ್ಧಾರಕ್ಕೆ ಬಂದಿದೆ. ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧದ ಈ ಕೋಪ ಯಾವ ರೀತಿಯಾಗಿ ತಿರಿಸಿಕೊಳ್ಳುತ್ತದೆ ಎಂಬುವುದು ಬರುವ ಪಂದ್ಯದಲ್ಲಿ ತಿಳಿಯಲಿದೆ. ಆದರೆ, ಅಭಿಮಾನಿಗಳಂತು ಧೋನಿ ನಿರ್ಧಾರಕ್ಕೆ ತಲೆ ಬಾಗಿದ್ದಾರೆ. ಐಸಿಸಿ ಹಾಗೂ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.