ದೆಹಲಿ, ಜೂ 8 (Daijiworld News/MSP): ಬೇಸಿಗೆ ಬಿಸಿಲು ಪ್ರಖರತೆ ಹೆಚ್ಚಾದಂತೆ ದೇಶದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಇನ್ನು ಉತ್ತರ ಭಾರತದಲ್ಲಿ ಬಿಸಿಲಿನ ಬೇಗೆಗೆ ಜನ ತತ್ತರಿಸುತ್ತಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ಸೂರ್ಯನ ಬಿಸಿಗೆ ಕಾದು ಕೆಂಡವಂತಾದ ರಾಷ್ಟ್ರರಾಜಧಾನಿಯ ಮಂದಿ ತತ್ತರಿಸಿಹೋಗಿದ್ದಾರೆ. ಹೀಗಿರುವ ನೀರನ್ನು ವಿನಾಕಾರಣ ಪೋಲು ಮಾಡಿದ್ದಕ್ಕೆ ವಿರಾಟ್ ಕೊಹ್ಲಿಗೆ ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಷನ್ ದಂಡ ವಿಧಿಸಿದೆ.
ಸ್ಥಳೀಯ ಮಾಧ್ಯಮ ವರದಿಯ ಅನ್ವಯ ಕೊಹ್ಲಿ ನಿವಾಸದ ನೆರೆಯ ಜನರು ಈ ಬಗ್ಗೆ ಕಾರ್ಪೋರೇಶನ್ಗೆ ದೂರು ಸಲ್ಲಿಸಿದ್ದು ಈ ದೂರಿನಲ್ಲಿ ಕೊಹ್ಲಿ ನಿವಾಸದಲ್ಲಿ ಇರುವ ಅರ್ಧ ಡಜನ್ ಕಾರುಗಳನ್ನು ಸಾವಿರಾರು ಲೀಟರ್ ಕುಡಿಯುವ ನೀರನ್ನು ಬಳಸಿ ತೊಳೆಯುತ್ತಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಅನ್ವಯ ಸದ್ಯ ಕ್ರಮಕೈಗೊಳ್ಳಲಾಗಿದೆ.
ಡಿಎಲ್ಎಫ್ ಒಂದನೇ ಹಂತದ ರಸ್ತೆಯಲ್ಲಿರುವ ಕೊಹ್ಲಿ ನಿವಾಸದಲ್ಲಿ ಅವರ ಸಿಬ್ಬಂದಿಯೊಬ್ಬ ಕುಡಿಯುವ ನೀರಿನಿಂದ ಕಾರನ್ನು ತೊಳೆದಿದ್ದಾನೆ. ಮೇಲಾಗಿ ಸಾಕಷ್ಟು ನೀರು ಪೋಲು ಮಾಡಿದ್ದಾನೆ. ಕೊಹ್ಲಿಯ ಒಡೆತನದಲ್ಲಿ 6 ಕ್ಕೂ ಹೆಚ್ಚು ಕಾರುಗಳಿವೆ. ಇವುಗಳನ್ನು ವಾಶ್ ಮಾಡಲು ಸಿಬ್ಬಂದಿ ವರ್ಗ ಸಾವಿರಕ್ಕೂ ಹೆಚ್ಚು ಲೀಟರ್ ಕುಡಿಯುವ ನೀರು ಪೋಲು ಮಾಡುತ್ತಿದ್ದಾರೆ ಎಂದು ಕಾರ್ಪೊರೇಷನ್ಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಷನ್ ಕುಡಿಯುವ ನೀರು ಪೋಲು ಮಾಡದಂತೆ ಎಚ್ಚರಿಸಿ 500 ರೂಪಾಯಿ ದಂಡ ವಿಧಿಸಿದೆ.