ಥಾಣೆ, ಡಿ.24(DaijiworldNews/AA): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ತೀವ್ರ ಮೂತ್ರ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೂ ತುತ್ತಾಗಿದ್ದಾರೆ. ಸದ್ಯ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಸ್ಪತ್ರೆಯು ಘೋಷಿಸಿದೆ.
ಈ ಬಗ್ಗೆ ಮಾತನಾಡಿದ ಅವರು, ನಾವು ಕಾಂಬ್ಳಿ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದೇವೆ. ಅವರ ಸಂಪೂರ್ಣ ಚಿಕಿತ್ಸೆಯು ಉಚಿತವಾಗಿರಲಿದೆ. ಆಸ್ಪತ್ರೆಯ ಉಸ್ತುವಾರಿಯಾಗಿರುವ ಎಸ್.ಸಿಂಗ್ ಅವರು ಕಾಂಬ್ಳಿಗೆ ಅವರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಇನ್ಮುಂದೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯಾವುದೇ ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಿಲ್ಲ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿನ ಚಿಕಿತ್ಸೆ ಕುರಿತು ಮಾತನಾಡಿರುವ ವಿನೋದ್ ಕಾಂಬ್ಳಿ ಅವರು, ವೈದ್ಯರು ಹೇಳುವುದನ್ನು ಚಾಚೂ ತಪ್ಪದೇ ಪಾಲಿಸುವುದಾಗಿ. ಅಲ್ಲದೆ ಈ ವೈದ್ಯರಿಂದಾಗಿ ನಾನು ಇಂದು ಜೀವಂತವಾಗಿದ್ದೇನೆ. ಇದೇ ವೇಳೆ ವೈದ್ಯಕೀಯ ತಂಡದ ನಡೆಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ವಿನೋದ್ ಕಾಂಬ್ಳಿ ಅವರ ನೆರವಿಗೆ ನಿಂತಿರುವ ಆಸ್ಪತ್ರೆಯ ಉಸ್ತುವಾರಿ ಎಸ್.ಸಿಂಗ್ ಅವರ ನಡೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.