ಲಂಡನ್, ಜೂನ್ 09 (Daijiworld News/SM): ವಿಶ್ವಕಪ್ ನಲ್ಲಿ ೨ನೇ ಪಂದ್ಯವಾಡುತ್ತಿರುವ ಟೀಂ ಇಂಡಿಯಾದ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು ಆರಂಭಿಕ ಜೋಡಿ ತಂಡಕ್ಕೆ ಉತ್ತಮ ಬುನಾದಿ ಹಾಕಿದೆ.
ಆಸಿಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಬೃಹತ್ ಮೊತ್ತಕ್ಕೆ ಬೇಕಿದ್ದ ಭದ್ರ ಅಡಿಪಾಯ ಈ ಜೋಡಿ ಹಾಕಿಕೊಟ್ಟಿದೆ. ಈ ಜೋಡಿ ಮೊದಲ ವಿಕೆಟ್ಗೆ 135 ಎಸೆತಗಳಲ್ಲಿ 127 ರನ್ಗಳ ಜೊತೆಯಾಟವಾಡಿದೆ. ಆ ಮೂಲಕ ಆಸಿಸ್ ವಿರುದ್ಧ ವೆಸ್ಟ್ ಇಂಡೀಸ್ನ ದಂತಕತೆಗಳಾದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೇಸ್ಮಂಡ್ ಹೈನೆಸ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ನ ಈ ಆರಂಭಿಕ ಬ್ಯಾಟ್ಸ್ಮನ್ಗಳ ಜೋಡಿ ಆಸ್ಟ್ರೇಲಿಯಾ ವಿರುದ್ಧ ಒಟ್ಟಾರೆ 1,152 ರನ್ಗಳನ್ನು ಜೋಡಿಸಿ ಕಾಂಗರೂ ಪಡೆಯ ಎದುರು ಒಡಿಐ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿತ್ತು. ಇದೀಗ ಈ ದಾಖಲೆಯನ್ನು ಟೀಂ ಇಂಡಿಯಾದ ಆರಂಭಿಕರಾದ ಧವನ್-ರೋಹಿತ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪ್ರಮುಖ ವಿಚಾರವೆಂದರೆ, ಈ ಜೋಡಿ ಕೇವಲ 22 ಇನ್ನಿಂಗ್ಸ್ ನಲ್ಲಿ ಅಂದರೆ, ಅತಿ ವೇಗದಲ್ಲಿ ಈ ದಾಖಲೆಯನ್ನು ಮಾಡಿರುವುದು ಮತ್ತೊಂದು ವಿಶೇಷವಾಗಿದೆ.
ಇದೇ ವೇಳೆ 57 ರನ್ಗಳನ್ನು ಸಿಡಿಸಿ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ವೇಗವಾಗಿ ಏಕದಿನ ಪಂದ್ಯದಲ್ಲಿ 2000 ರನ್ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮುರಿದಿದ್ದಾರೆ. ಈ ಹಿಂದೆ ಸಚಿನ್, 40 ಇನಿಂಗ್ಸ್ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ಸಾವಿರ ರನ್ಗಳನ್ನು ಗಳಿಸಿದ್ದು ದಾಖಲೆಯಾಗಿತ್ತು. ಆದರೆ ರೋಹಿತ್ ಕೇವಲ 37 ಇನಿಂಗ್ಸ್ಗಳಲ್ಲಿ ಈ ಸಾಧನೆ ಮೆರೆದಿದ್ದಾರೆ.