ಮೆಲ್ಬೋರ್ನ್, ಜ.01 (DaijiworldNews/AA): ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆತಿಥೇಯರ ವಿರುದ್ಧ 5 ಪಂದ್ಯಗಳ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ, ಆ ಬಳಿಕ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಇದಾದ ಬಳಿಕ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಮತುಕತೆ ವೇಳೆ ಗೌತಮ್ ಗಂಭೀರ್ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವರದಿ ಪ್ರಕಾರ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಂಡದ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಭಾರತ ತಂಡದ ಮೇಲೆ ಡ್ರೆಸ್ಸಿಂಗ್ ರೂಮಿನಲ್ಲೇ ಸಿಟ್ಟಾಗಿರುವ ಗಂಭೀರ್ ಆಟಗಾರರ ವಿರುದ್ಧ ಹರಿಹಾಯ್ದಿದ್ದಾರೆ ಎಂಬ ವಿವರ ಲೀಕ್ ಆಗಿದೆ.
'ಸಾಕು.. ಇದನ್ನು ಇಲ್ಲಿಗೆ ನಿಲ್ಲಿಸಿ. ನೀವು ಎಚ್ಚರವಾಗಿದ್ದೀರಾ ಅಥವಾ ಇಲ್ಲವಾ?. ನಿಮಗೆ ಮುಕ್ತವಾಗಿ ಆಡಲು 6 ತಿಂಗಳ ಕಾಲಾವಕಾಶ ನೀಡಿದ್ದೆವು, ಆದರೆ ಈಗ ಅದು ಮುಗಿದಿದೆ. ಇನ್ಮುಂದೆ ತಂಡಕ್ಕೆ ತಾನು ಹಾಕಿಕೊಂಡ ಪ್ಲಾನ್ ಪ್ರಕಾರ ಆಡದ ಆಟಗಾರನಿಗೆ ತಂಡದಿಂದ ಹೊರಹೋಗುವ ದಾರಿ ತೋರಿಸಲಾಗುತ್ತದೆ' ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಈ ಮೂಲಕ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನಲಾಗಿದೆ.