ಲಂಡನ್, ಜೂ 09 (Daijiworld News/SM): ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಆಸ್ಟ್ರೇಲಿಯಾ ತಂಡವನ್ನು 316 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ ಭಾರತ 36ರನ್ ಗಳ ಅಂತರದಿಂದ ಗೆಲುವು ದಾಖಲಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾ ತಂಡದ ಬೌಲರ್ ಗಳ ಬೆವರು ಇಳಿಸಿದರು. ಹಾಗೂ ಆ್ಯರಾನ್ ಫಿಂಚ್ ಪಡೆಗೆ ಗೆಲ್ಲಲು ಬೃಹತ್ ಗುರಿ ನೀಡಿದೆ. ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಉತ್ತಮ ಬುನಾದಿ ಹಾಕಿಕೊಟ್ಟಿತು. ನಿಧಾನಗತಿಯ ಆರಂಭ ಪಡೆದ ಈ ಜೋಡಿ ಕ್ರಮೇಣ ರನ್ ವೇಗವನ್ನು ಹೆಚ್ಚಿಸಿಕೊಂಡರು. ನೋಡ ನೋಡುತ್ತಿದ್ದಂತೆಯೇ ಇಬ್ಬರೂ ಆಟಗಾರರೂ ತಲಾ ಅರ್ಧಶತಕ ಗಳಿಸಿ ತಂಡಕ್ಕೆ ಶತಕದ ಜೊತೆಯಾಟ ನೀಡಿದರು.
ಈ ವೇಳೆ 57 ರನ್ ಗಳಿಸಿದ್ದ ರೋಹಿತ್ ಶರ್ಮಾ ನಿರ್ಗಮಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಶಿಖರ್ ಧವನ್ ಆಕರ್ಷಕ ಶತಕ ಸಿಡಿಸಿದರು. ಕೇವಲ 96 ಎಸೆತಗಳಲ್ಲಿ ಶಿಖರ್ ಧವನ್ 117 ರನ್ ಗಳನ್ನು ಸಿಡಿಸಿದರು. ಬಳಿಕ ಹಾರ್ದಿಕ್ ಪಾಂಡ್ಯಾ ಜೊತೆಗೂಡಿದ ಕೊಹ್ಲಿ ಅಕ್ಷರಶಃ ಆಸಿಸ್ ಬೌಲರ್ ಗಳ ಬೆಂಡೆತ್ತಿದರು. ಭರ್ಜರಿ 81 ರನ್ ಗಳ ಜೊತೆಯಾಟವಾಡಿದ ಈ ಜೋಡಿ, ತಂಡದ ರನ್ ಗಳನ್ನು 300ರ ಗಡಿ ದಾಟಿಸಿತು. ಈ ಹಂತದಲ್ಲಿ 48 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಪಾಂಡ್ಯಾ ವಿಕೆಟ್ ಒಪ್ಪಿಸಿ ಫೆವೀಲಿಯನ್ ಹಾದಿ ಹಿಡಿದರು.
ಬಳಿಕ ಕೊಹ್ಲಿ ಜೊತೆಗೂಡಿದ ಧೋನಿ 27 ರನ್ ಗಳಿಸಿ ಅಂತಿಮ ಓವರ್ ನಲ್ಲಿ ಔಟ್ ಆದರು. ಧೋನಿ ಬೆನ್ನ ಹಿಂದೆಯೇ ಕೊಹ್ಲಿ ಕೂಡ 82 ರನ್ ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು.
ಇನ್ನು ಭಾರತ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆಸೀಸ್ ತಂಡ ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಆಸಿಸ್ ಪರ ಡೇವಿಡ್ ವಾರ್ನರ್ 56 ರನ್ ಗಳನ್ನು ಸಿಡಿಸಿದರೆ, ನಾಯಕ್ ಪಿಂಚ್ 36 ರನ್ ಗಳನ್ನು ಸಿಡಿಸಿ ನಿರ್ಗಮಿಸಿದರು. ಇನ್ನು ಸ್ಟೀವನ್ ಸ್ಮಿತ್ 69 ರನ್ ಗಳನ್ನು ಭಾರಿಸಿದರೆ, ಉಸ್ಮಾನ್ ಖಾವ್ಜಾ 42 ರನ್ ಪೇರಿಸಿದರು. ಗ್ಲೆನ್ ಮ್ಯಾಕ್ಸ್ ವೆಲ್ 28 ಹಾಗೂ ಎಲೆಕ್ಸ್ ಕ್ಯಾರಿ 55 ರನ್ ಸಿಡಿಸಿ ಅಜೇಯರಾಗಿ ಉಳಿದು ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು. ಆದರೆ ಅಂತಿಮವಾಗಿ 50 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಆಸಿಸ್ ತಂಡ ಭಾರತಕ್ಕೆ ಶರಣಾಯಿತು.
ವರ್ಕೌಟ್ ಆಯಿತು ಕೊಹ್ಲಿ ಫಾರ್ಮುಲ:
ಟೀಂ ಇಂಡಿಯಾಕ್ಕೆ ಉತ್ತಮ ಆರಂಭವನ್ನು ನೀಡಿ ಶತಕ ಸಿಡಿಸಿದ ಬಳಿಕ ಶಿಖರ್ ಧವನ್ ಫೆವಿಲಿಯನ್ ಹಾದಿ ಹಿಡಿದರು. ಈ ಸಂದರ್ಭದಲ್ಲಿ ಕನ್ನಡಿಗ ಕೆ.ಎಸ್. ರಾಹುಲ್ ಅಂಗಣಕ್ಕೆ ಇಳಿಯಬೇಕಿತ್ತು. ಆದರೆ, ಅದರ ಬದಲು ಹಾರ್ದಿಕ್ ಪಾಡ್ಯರನ್ನು ಕೊಹ್ಲಿ ಕಣಕ್ಕಿಳಿಸಿದರು. ಇಲ್ಲಿ ಕೊಹ್ಲಿ ಲೆಕ್ಕಾಚಾರ ಫುಲ್ ಪಕ್ಕಾ ಆಗಿತ್ತು. ಪಾಂಡ್ಯ ಕೊಹ್ಲಿ ನಿರೀಕ್ಷೆಯನ್ನು ಹುಸಿಯಾಗಿಸದೆ, ಕೇವಲ 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಿತ 48ರನ್ ಗಳಿಸಿದರು. ಅರ್ಧಶತಕದಿಂದ ವಂಚಿತರಾಗಿ ನಿರ್ಗಮಿಸಿದರು.
ಇನ್ನು ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಕಣಕ್ಕಿಳಿಸಲ್ಪಟ್ಟ ಕನ್ನಡಿಗ ಲೋಕೇಶ್ ರಾಹುಲ್ ಕೂಡ ಉತ್ತಮವಾಗಿಯೇ ಬ್ಯಾಟ್ ಬೀಸಿದರು. ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದರೆ, ಮತ್ತೊಂದು ಬೌಂಡರ್ ಸಿಡಿಸಿದರು, ಎದುರಿಸಿದ 3 ಎಸೆತಗಳಲ್ಲಿ 11 ರನ್ ಚಚ್ಚಿದರು.
ಪಿಂಚ್ ಪಡೆಗೆ ಪಂಚ್ ನೀಡಿದ ಟೀಂ ಇಂಡಿಯಾ ಬೌಲರ್ಸ್
ಭಾರತ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಪಿಂಚ್ ಪಡೆ ಆರಂಭದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಲಾರಂಭಿಸಿದರು. ಆರಂಭಿಕ ಜೊತೆಯಾಟ ಮುರಿಯಲು ಭಾರತೀಯ ಬೌಲರ್ ಗಳು ಕೆಲಕಾಲ ಪರದಾಡುವಂತಾಯಿತು. ಅಂತಿಮವಾಗಿ 14ನೇ ಓವರ್ ನಲ್ಲಿ 36 ರನ್ ಗಳಿಸಿದ್ದ ನಾಯಕ್ ಪಿಂಚ್ ಗೆ ಪಂಚ್ ನೀಡುವಲ್ಲಿ ಕೊಹ್ಲಿ ಪಡೆ ಶಕ್ತವಾಯಿತು. ಬಳಿಕ ಕ್ರಿಸ್ ಗೆ ಬಂದ ಪ್ರತಿಯೊಬ್ಬ ಆಟಗಾರ ಕೂಡ ಭಾರತೀಯ ಬೌಲರ್ ಗಳಿಗೆ ಒಂದಿಷ್ಟು ಸಿಂಹಸ್ವಪ್ನವಾಗಿ ಕಾಡಿದರೂ ಕೂಡ ಅವರನ್ನು ಹತೋಟಿಯಲ್ಲಿಡಲು ಭಾರತೀಯ ಬೌಲರ್ ಗಳು ಶಕ್ತರಾದರು. ಟೀಂ ಇಂಡಿಯಾ ಪರ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಗಳನ್ನು ಕಬಳಿಸಿದರೆ, ಚಾಹಲ್ 2 ವಿಕೆಟ್ ಉರುಳಿಸಿದರು.
ಆ ಮೂಲಕ 50 ಓವರ್ ಗಳಲ್ಲಿ ಆಸಿಸಿ ಪಡೆಯನ್ನು ಟೀಂ ಇಂಡಿಯಾ ಆಲೌಟ್ ಮಾಡಿತು. ಅಂತಿಮವಾಗಿ ಪಿಂಚ್ ಪಡೆಗೆ ಪಂಚ್ ನೀಡಿದ ಟೀಂ ಇಂಡಿಯಾ ಗೆಲುವಿನ ನಗೆ ಚೆಲ್ಲಿತು.