ಮುಂಬೈ, ಜೂ 10 (Daijiworld News/MSP): 2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ತಂಡದ ಸ್ಟಾರ್ ಆಟಗಾರ, ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರ, ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.
32 ವರ್ಷದ ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ.ಜೊತೆಗೆ 111 ವಿಕೆಟ್ಗಳನ್ನು ಪಡೆದಿದ್ದಾರೆ.
ಯುವರಾಜ್ ಸೋಮವಾರ ನಿವೃತ್ತಿ ಹೇಳಲಿದ್ದಾರೆಂದು ಭಾನುವಾರವೇ ಸಾಮಾಜಿಕ ತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅದರಂತೆ ಬಿಸಿಸಿಐ ಜೊತೆ ಚರ್ಚಿಸಿ ಮುಂಬೈನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಸಿಕ್ಸರ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು 19 ವರ್ಷದ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಯುವರಾಜ್ ಸಿಂಗ್ ಆಲ್ರೌಂಡರ್ ಆಗಿ ಭಾರತದ ತಂಡದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ನಲ್ಲಿ ಪಂದ್ಯಾಟದಲ್ಲಿ ಯುವರಾಜ್ ಆಡಿದ್ದರು. ಆಟಗಾರ ಯುವರಾಜ್ಸಿಂಗ್ಗೆ ಕ್ಯಾನ್ಸರ್ ಕಾಡಿತ್ತು. ಆ ಬಳಿಕ ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಯುವರಾಜ್ 2017ರಲ್ಲಿ ಭಾರತದ ಪರ ಕೊನೆಯದಾಗಿ ಬ್ಯಾಟ್ ಬೀಸಿದ್ದರು.