ಮುಂಬೈ, ಜೂ 10 (Daijiworld News/SM): ‘ಯುವರಾಜ್ ಸಿಂಗ್’ ಹೆಸರು ಕೇಳುವಾಗ ಪಟ್ಟನೆ ನೆನಪಾಗುವುದು ಸಿಕ್ಸ್ ಗಳು, ಟಿ-೨೦ ಹಾಗೂ ಐಸಿಸಿ ವಿಶ್ವ ಕಪ್ ಗೆದ್ದುಕೊಂಡಿರುವ ಸಂಭ್ರಮದ ಕ್ಷಣಗಳು. ಹೌದು ಭಾರತ ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಈ ಎರಡು ವಿಶ್ವಕಪ್ ಗೆದ್ದಾಗ ಯುವಿ ಕೂಡ ಪ್ರಮುಖ ಕಾರಣರಾಗಿದ್ದರು. ಬಳಿಕ ಒಂದಿಷ್ಟು ಫಿಟ್ ನೆಸ್ ಕೊರತೆಯಿಂದಾಗಿ ಅವರು ತಂಡದಿಂದ ಹೊರಗುಳಿಯಬೇಕಾಯಿತು. ಆದರೆ, ಇದೀಗ ಅವರು ನಿವೃತ್ತಿ ಘೋಷಿಸಿದ್ದು, ಇದರ ಜತೆಗೆ ಒಂದು ಬಾಂಬ್ ಕೂಡ ಸಿಡಿಸಿದ್ದಾರೆ.
ಯುವಿ ಆಯ್ಕೆ ಸಮಿತಿ ಮುಂದೆ ತಾವು ಮಾಡಿಕೊಂಡಿದ್ದ ಮನವಿವೊಂದರ ಮಾಹಿತಿ ಹೊರಹಾಕಿದ್ದು, 2017ರಲ್ಲಿ ಯುವರಾಜ್ ಸಿಂಗ್ ಯೋ-ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ. ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಲು ತಮಗೆ ಕೆಲ ವಾರಗಳ ಕಾಲಾವಕಾಶ ನೀಡಿ ಎಂದು ಬಿಸಿಸಿಐ ಮುಂದೆ ತಮ್ಮ ಮನವಿಯನ್ನು ಸಲ್ಲಿಸಿದ್ದರು. ಪರೀಕ್ಷೆಯನ್ನು ಪಾಸ್ ಮಾಡುವ ವಿಶ್ವಾಸ ಯುವಿಗಿತ್ತು. ಆದರೆ, ಬಿಸಿಸಿಐ ಮಾತ್ರ ನನಗೆ ಯಾವುದೇ ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಯೋ-ಯೋ ಪರೀಕ್ಷೆಯನ್ನು ತೇರ್ಗಡೆಗೊಳಿಸದಿದ್ದರೂ ಪರವಾಗಿಲ್ಲ, ನಿಮಗೆ ವಿದಾಯದ ಪಂದ್ಯ ಆಡಿಸುವುದಾಗಿ ಬಿಸಿಸಿಐ ಹೇಳಿಕೊಂಡಿತ್ತು. ಆದರೆ, ಇದಕ್ಕೆ ಪ್ರತ್ಯುತ್ತರವಾಗಿ ತಾವೂ ಯೋ-ಯೋ ಪರೀಕ್ಷೆ ಪಾಸ್ ಮಾಡದಿದ್ದರೆ ಅದು ವಿದಾಯದ ಪಂದ್ಯವಾಗುವುದಿಲ್ಲ. ದಯವಿಟ್ಟು ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಯುವಿಗೆ ಇಂದಿನ ತನಕವೂ ಯಾವುದೇ ಅವಕಾಶ ಸಿಕ್ಕಿರಲಿಲ್ಲ.
ಈ ಹಿನ್ನೆಲೆ ವಿದಾಯ ಘೋಷಣೆಯ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ಅವರು ಹೊರಹಾಕಿದ್ದಾರೆ. ಇನ್ನು ಪ್ರತಿಕ್ರಿಯೆ ನೀಡುವುದು ಸಾಕಷ್ಟಿದೆ ಆದರೆ, ಸಮಯ ಬಂದಾಗ ಎಲ್ಲಾ ವಿಚಾರಗಳನ್ನು ತಿಳಿಸುತ್ತೇನೆ ಎಂದು ಯುವಿ ಹೇಳಿದ್ದಾರೆ.