ಲಕ್ನೋ,ಜ.17 (DaijiworldNews/AK): ಟೀಂ ಇಂಡಿಯಾದ ಟಿ20 ಆಟಗಾರ ರಿಂಕು ಸಿಂಗ್ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರವೇ ಸಪ್ತಪದಿ ತುಳಿಯಲಿದ್ದಾರೆ ಎಂದು ಸುದ್ದಿ ವೈರಲ್ ಆಗಿದೆ.
ಈ ಸುದ್ದಿಯ ಬಗ್ಗೆ ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಪ್ರತಿಕ್ರಿಯಿಸಿ, ರಿಂಕು ಅವರ ಕುಟುಂಬ ಮದುವೆ ಪ್ರಸ್ತಾಪ ಕಳುಹಿಸಿದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ತಿಳಿಸಿದರು.
ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸದಸ್ಯರಾಗಿದ್ದ ರಿಂಕು ಮುಂದಿನ ವಾರದಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ.27 ವರ್ಷದ ರಿಂಕು ಆಗಸ್ಟ್ 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ ಇಲ್ಲಿಯವರೆಗೆ ಎರಡು ಏಕದಿನ ಮತ್ತು 30 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇನ್ನು ಪ್ರಿಯಾ ಅವರು ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆ ಆಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಈ ಸುದ್ದಿಯ ಬಗ್ಗೆ ಇಲ್ಲಿಯವರೆಗೆ ರಿಂಕು ಸಿಂಗ್ ಆಗಲಿ ಸಂಸದೆ ಪ್ರಿಯಾ ಸರೋಜ್ ಖಚಿತಪಡಿಸಿಲ್ಲ.