ಮುಂಬೈ,ಜ.23(DaijiworldNews/AK): ರಣಜಿ ಟೂರ್ನಿಯ ದ್ವಿತೀಯ ಸುತ್ತಿನ ಮೊದಲ ಪಂದ್ಯಗಳಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು ಮೊದಲ ಇನಿಂಗ್ಸ್ಗಳಲ್ಲಿ ಮುಗ್ಗರಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ ಕಾಣಿಸಿಕೊಂಡಿದ್ದರು.
ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 3 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಯಶಸ್ವಿ ಜೈಸ್ವಾಲ್ ಕೇವಲ 4 ರನ್ಗಳಿಸಿ ಔಟಾದರು.ಆ ಬಳಿಕ ಬಂದ ಅಜಿಂಕ್ಯ ರಹಾನೆ 12 ರನ್ಗಳಿಸಿ ಇನಿಂಗ್ಸ್ ಕೊನೆಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (11)ಕ್ಕೆ ಔಟಾದರು.
ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಕೇವಲ 4 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಕೇರಳ ವಿರುದ್ಧ ಪಂದ್ಯದಲ್ಲಿ ಮಧ್ಯ ಪ್ರದೇಶ್ ಪರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ (0) ಸೊನ್ನೆ ಸುತ್ತಿ ಹಿಂತಿರುಗಿದ್ದಾರೆ.
ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಬ್ಯಾಟ್ ಬೀಸಿರುವ ರಿಷಭ್ ಪಂತ್ ಕಲೆಹಾಕಿರುವುದು ಕೇವಲ 1 ರನ್ ಮಾತ್ರ.ಬರೋಡಾ ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕನಾಗಿ ಕಾಣಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್ ಕೇವಲ 10 ರನ್ಗಳಿಸಿ ಔಟಾಗಿದ್ದಾರೆ.
ಭಾರತ ತಂಡವು ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದರಿಂದ, ಟೀಮ್ ಇಂಡಿಯಾ ಆಟಗಾರರು ರಣಜಿ ಟೂರ್ನಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ.