ನವದೆಹಲಿ, ಜ.24 (DaijiworldNews/AA): ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಪತ್ನಿ ಆರತಿ ಅಹ್ಲಾವತ್ ಅವರ 20 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಶೀಘ್ರವೇ ವಿಚ್ಛೇದನ ನೀಡಲಿದ್ದಾರೆ ಎನ್ನಲಾಗಿದೆ.
2004 ರಲ್ಲಿ ಸೆಹ್ವಾಗ್ ಮತ್ತು ಆರತಿ ವಿವಾಹವಾಗಿದ್ದು, ಈ ದಂಪತಿಗೆ ಆರ್ಯವೀರ್ ಹಾಗೂ ವೇದಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ನು ಸೆಹ್ವಾಗ್ ಮತ್ತು ಆರತಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದು, ದಂಪತಿ ಹಲವಾರು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸೆಹ್ವಾಗ್ ಅವರ ಇತ್ತೀಚಿನ ದೀಪಾವಳಿ ಆಚರಣೆಯ ಫೋಟೋ ಅಪ್ಲೋಡ್ ಮಾಡಿದ್ದರು. ಇದರಲ್ಲಿ ತಾಯಿ, ಮಕ್ಕಳು ಇದ್ದರೆ ಪತ್ನಿಯ ಫೋಟೋ ಇರಲಿಲ್ಲ. ಕೆಲವು ವಾರಗಳ ಹಿಂದೆ ಸೆಹ್ವಾಗ್ ಕೇರಳದ ಪಾಲಕ್ಕಾಡ್ನಲ್ಲಿರುವ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ವೇಳೆಯೂ ಪತ್ನಿ ಆರತಿ ಕಾಣಿಸಿಕೊಂಡಿರಲಿಲ್ಲ. ಇವೆಲ್ಲವೂ ವೀರೇಂದ್ರ ಸೆಹ್ವಾಗ್ ಮತ್ತು ಪತ್ನಿ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬುದಕ್ಕೆ ಪುಷ್ಟಿ ನೀಡಿದೆ. ಆದರೆ ಇದುವರೆಗೂ ಇಬ್ಬರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.