ಇಸ್ಲಮಾಬಾದ್, ಜ.30 (DaijiworldNews/AA): ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು ಕೇವಲ 3 ವಾರಗಳು ಮಾತ್ರ ಉಳಿದಿದ್ದು, ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಪಾಕಿಸ್ತಾನಿ ಮಂಡಳಿ(ಪಿಸಿಬಿ) ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಉದ್ಘಾಟನಾ ಸಮಾರಂಭ ರದ್ದಾಗುವ ಜೊತೆಗೆ ಟೂರ್ನಿಗೂ ಮುನ್ನ ಯಾವುದೇ ಪತ್ರಿಕಾಗೋಷ್ಠಿ ಹಾಗೂ ನಾಯಕರ ಅಧಿಕೃತ ಫೋಟೋಶೂಟ್ ಇರುವುದಿಲ್ಲ ಎಂದು ವರದಿಯಾಗಿದೆ. ಹಾಗೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಈ ಉಭಯ ತಂಡಗಳು ನಿಗದಿತ ಸಮಯಕ್ಕೆ ಪಾಕಿಸ್ತಾನ ತಲುಪಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಪ್ರಸ್ತುತ ಶ್ರೀಲಂಕಾ ಮತ್ತು ಭಾರತದಲ್ಲಿ ವಿಭಿನ್ನ ಸರಣಿಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಆಡುತ್ತಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು, ಇದರಲ್ಲಿ ಚಾಂಪಿಯನ್ಸ್ ಟ್ರೋಫಿ ತಂಡದ ಕೆಲ ಆಟಗಾರರು ಕೂಡ ಇದ್ದಾರೆ. ಇದರೊಂದಿಗೆ ಇಂಗ್ಲೆಂಡ್ ತಂಡವೂ ಪ್ರಸ್ತುತ ಭಾರತದಲ್ಲಿ ಟಿ20 ಸರಣಿಯನ್ನು ಆಡುತ್ತಿದ್ದು, ಆ ಬಳಿಕ ಏಕದಿನ ಸರಣಿಯನ್ನು ಕೂಡ ಆಡಲಿದೆ.
ಉದ್ಘಾಟನಾ ಸಮಾರಂಭ ಮಾತ್ರವಲ್ಲ, ಪ್ರತಿ ಐಸಿಸಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲಾ ತಂಡಗಳ ನಾಯಕರ ಪತ್ರಿಕಾಗೋಷ್ಠಿಯೂ ಇರುತ್ತದೆ. ನಂತರ ನಾಯಕರು ಪಂದ್ಯಾವಳಿಯ ಟ್ರೋಫಿಯೊಂದಿಗೆ ಫೋಟೋಶೂಟ್ ಕೂಡ ಮಾಡುತ್ತಾರೆ. ಆದರೆ ಈಗ ಈ ಎಲ್ಲವೂ ರದ್ದಾಗುವ ಸಾಧ್ಯತೆ ಇದೆ.