ಮುಂಬೈ, ಫೆ.05 (DaijiworldNews/AK): ಚಾಂಪಿಯನ್ಸ್ ಟ್ರೋಫಿ ಮುಕ್ತಾಯದೊಂದಿಗೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ. ಈ ಟೂರ್ನಿಯ ಬಳಿಕ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದೇ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿಯ ಬಳಿಕ ನಿವೃತ್ತಿ ಘೋಷಿಸುವಂತೆ ರೋಹಿತ್ ಶರ್ಮಾಗೆ ಸೂಚಿಸಲಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.

ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ಅಂತಿಮ ಪಂದ್ಯವೇ ರೋಹಿತ್ ಶರ್ಮಾ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಏಕದಿನ ಮ್ಯಾಚ್ ಆಗಿರಲಿದೆ.ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ರೋಹಿತ್ ಶರ್ಮಾಗೆ ಬಿಸಿಸಿಐ ಕಡೆಯಿಂದ ನಿವೃತ್ತಿ ಸೂಚನೆ ದೊರೆತಿದ್ದು, ಈ ಬಾರಿಯ ಟೂರ್ನಿಯ ಬಳಿಕ ಅವರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಕಡೆಯಿಂದ ಏಕದಿನದಿಂದಲೂ ಬಿಸಿಸಿಐ ನಿವೃತ್ತಿ ಬಯಸುತ್ತಿರುವುದು ಸ್ಪಷ್ಟ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆ ಇದೆ.