ಮುಂಬೈ , ಫೆ.12 (DaijiworldNews/AK):ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಈ ಬಾರಿಯ ಟೂರ್ನಿಗೆ ಆಯ್ಕೆ ಮಾಡಲಾಗಿದ್ದ 15 ಸದಸ್ಯರಲ್ಲಿ ಐವರು ಆಟಗಾರರು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡದಲ್ಲಿ ಐದು ಬದಲಾವಣೆ ಆಗಿದೆ.

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಪಾದದ ನೋವಿನ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಬಾರಿ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಕಣಕಾಲಿನ ಹಿ೦ಭಾಗದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಲು ವಿಳಂಬವಾಗಲಿದ್ದು, ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿಲ್ಲ. ಆಸ್ಟ್ರೇಲಿಯಾ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸಹ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವುದಿಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ನಿರಾಕರಿಸಿದೆ.
ಆಸೀಸ್ ಪಡೆಯ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅಚ್ಚರಿ ಎಂಬಂತೆ ಕೆಲ ದಿನಗಳ ಹಿಂದೆ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಾರ್ಕಸ್ ಸ್ಟೊಯಿನಿಸ್ ಕಾಣಿಸಿಕೊಳ್ಳುವುದಿಲ್ಲ.ಇದೀಗ ಈ ಐವರ ಸ್ಥಾನಕ್ಕೆ ಬದಲಿಯಾಗಿ ಜೇಕ್ ಫ್ರೇಸರ್ ಮೆಕ್ಗುರ್ಕ್, ತನ್ವೀರ್ ಸಂಘ, ಸೆನ್ಸರ್ ಜಾನ್ಸನ್, ಬೆನ್ ದ್ವಾರ್ಶುಯಿಸ್ ಹಾಗು ಶಾನ್ ಅಬಾಟ್ ಆಯ್ಕೆಯಾಗಿದ್ದಾರೆ.