ಮುಂಬೈ, ಫೆ.15 (DaijiworldNews/AA): ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-೩ ಅನ್ನು ಭರ್ಜರಿಯಾಗಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯೆಯಾಗಿರುವ ಶ್ರೇಯಾಂಕಾ ಪಾಟೀಲ್ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಈ ಗಾಯದ ಸಮಸ್ಯೆಯಿಂದ ಅವರು ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಮೊಣಕಾಲಿನ ಗಾಯದ ಸಮಸ್ಯೆಯ ಕಾರಣ ಶ್ರೇಯಾಂಕಾ ಪಾಟೀಲ್ 2024ರ ಮಹಿಳಾ ಟಿ20 ವಿಶ್ವಕಪ್ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸ ಹಾಗೂ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಿಂದಲೂ ಹೊರಗುಳಿದಿದ್ದರು. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ ಪ್ರಾರಂಭವಾದರೂ ಶ್ರೇಯಾಂಕಾ ಪಾಟೀಲ್ ಕಾಣಿಸಿಕೊಂಡಿಲ್ಲ.
ಶ್ರೇಯಾಂಕಾ ಅವರ ಬದಲಿಯಾಗಿ ಆರ್ಸಿಬಿ ತಂಡವು ಅನುಭವಿ ಆಲ್ರೌಂಡರ್ ಸ್ನೇಹ್ ರಾಣಾ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆರ್ಸಿಬಿ ತಂಡದ ಮೊದಲ ಪಂದ್ಯದಲ್ಲಿ ಸ್ನೇಹ್ ರಾಣಾ ಡಗೌಟ್ನಲ್ಲಿ ಕಾಣಿಸಿಕೊಂಡಿಡಿರುವುದರಿಂದ ಶ್ರೇಯಾಂಕಾ ಬದಲಿಗೆ ಸ್ನೇಹ್ ಆರ್ಸಿಬಿ ತಂಡಕ್ಕೆ ಎಂಟ್ರಿ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.