ಮುಂಬೈ, ಫೆ.17 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿದ್ದು, ಮಾರ್ಚ್ 22 ರಿಂದ ಈ ಟೂರ್ನಿ ಆರಂಭವಾಗಲಿದೆ. ಮಾರ್ಚ್ 23 ರಂದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೊರಗುಳಿಯಬೇಕಾಗುತ್ತದೆ.

ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು.
ಆದ್ದರಿಂದ ಈ ಒಂದು ಪಂದ್ಯದ ನಿಷೇಧದ ಶಿಕ್ಷೆ ಈ ಬಾರಿಯ ಐಪಿಎಲ್ನಲ್ಲಿ ಮುಂದುವರೆಯಲಿದೆ. ಅದರಂತೆ ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಆಡುವ ಮೊದಲ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವುದಿಲ್ಲ.