ಮುಂಬೈ, ಫೆ.21 (DaijiworldNews/AA): ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮತ್ತು ನಟಿ ಧನಶ್ರೀ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ.

ಫೆ.20 ರಂದು ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ಚಹಾಲ್ - ಧನಶ್ರೀ ಅಂತಿಮ ವಿಚ್ಛೇದನ ವಿಚಾರಣೆ ನಡೆಯಿತು. ಬೆಳಿಗ್ಗೆ 11 ಗಂಟೆಯಿಂದ ವಿಚಾರಣೆಗೆ ಹಾಜರಾದ ಚಹಾಲ್ ಹಾಗೂ ಧನಶ್ರೀಗೆ ಸುಮಾರು 45 ನಿಮಿಷಗಳ ಕಾಲ ನಡೆದ ಕೌನ್ಸಿಲಿಂಗ್ಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿತು.
ಈ ವೇಳೆ ತಾವಿಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯುತ್ತಿದ್ದೇವೆ. ಹೊಂದಾಣಿಕೆಯ ಸಮಸ್ಯೆಯಿಂದಾಗಿ ಬೇರೆ ಬೇರೆ ಆಗಲು ನಿರ್ಧರಿಸಿದ್ದೇವೆ ಎಂದು ಕೋರ್ಟ್ ಗೆ ತಿಳಿಸಿದ್ದಾರೆ. ಈ ಪ್ರಕರಣವನ್ನ ಪರಿಶೀಲಿಸಿದ ನಂತರ ಮತ್ತು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಂಡ ಬಳಿಕ ನ್ಯಾಯಾಧೀಶರು ಸಂಜೆ 4.30ಕ್ಕೆ ಅಧಿಕೃತವಾಗಿ ಅವರ ವಿಚ್ಛೇದನ ತೀರ್ಪು ಪ್ರಕಟಿಸಿದ್ದಾರೆ.
ವಿಚ್ಛೇದನದ ಬಳಿಕ ಚಹಾಲ್ ಹಾಗೂ ಧನಶ್ರೀ ಇಬ್ಬರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಚಹಾಲ್ ದೇವರು ನನ್ನನ್ನು ಎಷ್ಟೋ ಬಾರಿ ಕಾಪಾಡಿದ್ದಾನೆ. ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ತಿಳಿಯದೇ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇನ್ನು ಧನಶ್ರೀ ಅವರು ಒತ್ತಡದಿಂದ ಅದೃಷ್ಟಶಾಲಿಯಾಗುವವರೆಗೆ. ದೇವರು ನಮ್ಮ ಒತ್ತಡವನ್ನು ಸಂತೋಷವಾಗಿ ಪರಿವರ್ತಿಸುವ ರೀತಿ ಎಷ್ಟು ಅದ್ಭುತವಾಗಿದೆ? ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡಕ್ಕೆ ಒಳಗಾದರೆ ಹೆಚ್ಚು ಯೋಚಿಸುತ್ತಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂಬುದನ್ನು ನೆನಪಿಡಿ. ನೀವು ಆ ಉದ್ವೇಗವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ಎಲ್ಲಾ ಚಿಂತೆಗಳನ್ನು ದೇವರಿಗೆ ಅರ್ಪಿಸಿ ಎಲ್ಲದಕ್ಕೂ ಪ್ರಾರ್ಥಿಸಬಹುದು.ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಮಾಡಬಹುದು ಎಂದು ನಂಬುವುದರಲ್ಲಿ ಬೇರೆಯದೇ ರೀತಿಯ ಶಕ್ತಿಯಿದೆ ಎಂದು ಪೋಸ್ಟ್ ಮಾಡಿದ್ದಾರೆ.