ದುಬೈ, ಫೆ.23 (DaijiworldNews/AA): ಇಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 6 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸಿದೆ. ಈ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಸರಳತೆಯ ಮೂಲಕವೇ ಎಲ್ಲರ ಹೃದಯವನ್ನ ಗೆದ್ದಿದ್ದಾರೆ.

ಪಾಕಿಸ್ತಾನ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಅವರ ಶೂ ಲೇಸ್ ಕಟ್ಟುವ ಮೂಲಕ ಕಿಂಗ್ ಕೊಹ್ಲಿ ಸರಳತೆಯನ್ನ ಮೆರೆದಿದ್ದಾರೆ. ಬ್ಯಾಟಿಂಗ್ ಮಾಡುವ ವೇಳೆ ನಸೀಮ್ ಶಾ ಅವರ ಶೂ ಲೇಸ್ ಕಳಚಿತ್ತು. ಇದನ್ನು ನೋಡಿದ ಕೊಹ್ಲಿ ನಸೀಮ್ ಬಳಿಗೆ ಬಂದು ಬಿಚ್ಚಿದ್ದ ಶೂ ಲೇಸ್ ಅನ್ನು ಸರಿಯಾಗಿ ಕಟ್ಟಿದ್ದಾರೆ.
ವಿರಾಟ್ ಕೊಹ್ಲಿಯ ಈ ನಡೆಯಿಂದ ಕ್ರಿಕೆಟ್ ಆಡುವ ಎರಡು ರಾಷ್ಟ್ರಗಳ ನಡುವಿನ ಪರಸ್ಪರ ಗೌರವವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇದೀಗ ಕೊಹ್ಲಿ ಅವರು ನಸೀಮ್ ಅವರ ಶೂ ಲೇಸ್ ಕಟ್ಟುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೊಹ್ಲಿ ಅವರ ಈ ನಡೆಗೆ ಕ್ರೀಡಾ ಮನೋಭಾವದ ನಿಜವಾದ ಪ್ರತಿಬಿಂಬ ಎಂದು ಹಲವರು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಮೈದಾನದಲ್ಲಿ ಸ್ಪರ್ಧೆ ತೀವ್ರವಾಗಿದ್ದರೂ, ಕ್ರೀಡಾ ಮನೋಭಾವವು ಕ್ರಿಕೆಟ್ನ ಮೂಲ ಮೌಲ್ಯವಾಗಿ ಉಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇಂದು ಶತಕದೊಂದಿಗೆ ಪಂದ್ಯವನ್ನ ಗೆಲ್ಲಿಸಿದ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿಯ ದಾಖಲೆಗಳ ಬಗ್ಗೆ ಹೇಳುವುದಾದರೆ...
*ಏಕದಿನದಲ್ಲಿ ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ 14,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ಬರೆದಿದ್ದಾರೆ.
*ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 158 ಕ್ಯಾಚ್ಗಳನ್ನು ಪಡೆಯುವ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ದಾಖಲೆ ಬರೆದರು.
*ಪಾಕಿಸ್ತಾನ ವಿರುದ್ಧ ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯೂ ವಿರಾಟ್ ಕೊಹ್ಲಿ ಪಾಲಾಗಿದೆ.