ನ್ಯಾಟಿಂಗ್ಹ್ಯಾಮ್, ಜೂ 13 (Daijiworld News/SM): 2019ರ ವಿಶ್ವಕಪ್ ನಲ್ಲಿ ಗೆಲುವು ಸೋಲಿಗಿಂತ ಪಂದ್ಯ ರದ್ದಾಗುವುದೇ ಜಾಸ್ತಿ ಎಂಬಾಂತಾಗುತ್ತಿದೆ. ಗುರುವಾರ ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯ ಇದರಿಂದ ಹೊರತಾಗಿಲ್ಲ. ಸುರಿದಿರುವ ಭಾರೀ ಮಳೆಯಿಂದಾಗಿ ಪಂದ್ಯ ರದ್ದಾಗಿದೆ.
ಈ ಸಲದ ವಿಶ್ವಕಪ್ನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನಾಲ್ಕು ಪಂದ್ಯಗಳನ್ನು ಇಲ್ಲಿಯ ತನಕ ರದ್ದು ಪಡಿಸಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ರದ್ದಾಗಿದ್ದು, ಎರಡೂ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆದುಕೊಂಡಿವೆ.
ಬುಧವಾರ ಸುರಿದ ಮಳೆಯಿಂದಾಗಿ ಮೈದಾನ ಸಜ್ಜುಗೊಂಡಿರಲಿಲ್ಲ. ಆದರೆ ಗುರುವಾರವೂ ಪದೇ ಪದೇ ಮಳೆ ಸುರಿಯುತ್ತಿತ್ತು. ಪರಿಣಾಮ ಪಂದ್ಯಕ್ಕೆ ಅಡಚಣೆ ಎದುರಾಗಿದೆ. ಇನ್ನು ಅಂಪೈರ್ಗಳು ಮೈದಾನಕ್ಕಿಳಿದು ಪರಿಶೀಲನೆ ನಡೆಸಿದ್ದು, ಪಂದ್ಯವನ್ನು ರದ್ದುಗೊಳಿಸಿದ್ದಾರೆ. ಆ ಮೂಲಕ ಪಂದ್ಯ ವೀಕ್ಷಣೆಗೆ ಕಾತರದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಇನ್ನು ಭಾರತ ಜೂನ್ 16ರಂದು ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದೆ.
ಈ ಹಿಂದೆ ಮೂರು ಪಂದ್ಯಗಳು ರದ್ದು
ಈಗಾಗಲೇ ಪಾಕಿಸ್ತಾನ ಹಾಗೂ ಶ್ರಿಲಂಕಾ ನಡುವಿನ ಪಂದ್ಯ, ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ-ಶ್ರೀಲಂಕಾ ತಂಡಗಳ ನಡುವಿನ ಪಂದ್ಯ ಮಳೆಗಾಹುತಿಯಾಗಿವೆ. ನ್ಯೂಜಿಲೆಂಡ್ ಈಗಾಗಲೇ ಶ್ರೀಲಂಕಾ, ಬಾಂಗ್ಲಾ ಹಾಗೂ ಆಫ್ಘಾನ್ ತಂಡಗಳ ವಿರುದ್ಧ ಗೆಲುವು ದಾಖಲು ಮಾಡಿದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಬಲಿಷ್ಠ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ನಗೆ ಬೀರಿದ್ದು, ಮೂರನೇ ಪಂದ್ಯ ರದ್ದಾಗಿದೆ.