ದುಬೈ, ಮಾ.10 (DaijiworldNews/AK):ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ನಾಲ್ಕು ವಿಕೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಪ್ರಶಸ್ತಿಗೆ ಮುತ್ತಿಕ್ಕಿದೆ.

12 ವರ್ಷಗಳ ಬಳಿಕ ಭಾರತ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿದ್ದು, ಒಟ್ಟಾರೆಯಾಗಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ಈ ಹಿಂದೆ 2002 ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪ್ರಶಸ್ತಿ ಗೆದ್ದುಕೊಂಡಿತ್ತು. ಇನ್ನು ಫೈನಲ್ ನಲ್ಲಿ ಗೆಲ್ಲಲು 252 ರನ್ ಗುರಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 254 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರುವ ಜೊತೆ ಪ್ರಶಸ್ತಿ ಮುಡಿಗೇರಿಸಿತು.
ರೋಹಿತ್ ಶರ್ಮಾ ಹಾಗೂ ಶುಬ್ ಮನ ಗಿಲ್ ಮೊದಲ ವಿಕೆಟ್ ಗೆ ನಡೆಸಿಕೊಟ್ಟ 105 ರನ್ ಗಳ ಜೊತೆಯಾಟವು ಭಾರತ ಗೆಲುವಿಗೆ ನಿರ್ಣಾಯಕವಾಗಿ ಪರಿಣಮಿಸಿತು. ಭಾರತ ಪರ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಗಳಿಸಿ ಮಿಂಚಿದರು.
ಇನ್ನು ಟೀಮ್ ಇಂಡಿಯಾ ಗೆಲುವು ಸಾಧಿಸುತ್ತಲೇ ಇತ್ತ ಭಾರತದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹಲವೆಡೆಗಳಲ್ಲಿ ಅಭಿಮಾನಿಗಳು ರಸ್ತೆಗಿಳಿದು ಸಂಭ್ರಮಾಚರಣೆ ನಡೆಸುತ್ತಿರುವುದು ಕಂಡುಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಭಾರತದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.