ಮುಂಬೈ, ಮಾ.12 (DaijiworldNews/AA): ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ನ ಅದೊಂದು ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಹಿನಿಯೊಂದಿಗೆ ಮಾತನಾಡಿರುವ ಅವರು, ಬಹಳ ವರ್ಷಗಳಿಂದ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ ಜೋಸ್ ಬಟ್ಲರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದ ಬಗ್ಗೆ ಬೇಸರವನ್ನೂ ಹೊರಹಾಕಿದ್ದಾರೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಕೇವಲ 6 ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಅದರ ಪ್ರಕಾರ ರಾಜಸ್ಥಾನ್ ರಾಯಲ್ಸ್ ತಂಡದಿಂದ ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ಅವರನ್ನು ಮೆಗಾ ಹರಾಜಿನಲ್ಲೂ ಖರೀದಿಸಲು ಸಾಧ್ಯವಾಗಲಿಲ್ಲ.
ಇದೀಗ ಈ ಬಗ್ಗೆ ಮಾತನಾಡಿರುವ ಸಂಜು ಸ್ಯಾಮ್ಸನ್, ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಜೋಸ್ ಬಟ್ಲರ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರ ತುಂಬಾ ಕಷ್ಟಕರವಾಗಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಾನು ಜೊಸ್ ಜೊತೆ ರಾಜಸ್ಥಾನ್ ತಂಡದಿಂದ ಬಿಡುಗಡೆ ಮಾಡಿದ ಬಗ್ಗೆ ಮಾತನಾಡಿದೆ. ತಂಡದಿಂದ ಬಿಡುಗಡೆ ಮಾಡುವ ನಿರ್ಧಾರದಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ ಎಂದೂ ಜೊಸ್ ನನ್ನ ಬಳಿ ಹೇಳಿದರು ಎಂದಿದ್ದಾರೆ.
ಐಪಿಎಲ್ನಲ್ಲಿ ಒಂದು ವಿಷಯವನ್ನು ಬದಲಾಯಿಸಲು ನನಗೆ ಅವಕಾಶ ಸಿಕ್ಕಿದ್ದರೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಆಟಗಾರರನ್ನು ಬಿಡುಗಡೆ ಮಾಡುವ ನಿಯಮವನ್ನು ನಾನು ಬದಲಾಯಿಸುತ್ತೇನೆ. ಈ ನಿಯಮದಿಂದ ನೀವು ವೈಯಕ್ತಿಕ ಮಟ್ಟದಲ್ಲಿ ವರ್ಷಗಳಿಂದ ನಿರ್ಮಿಸಲಾದ ಸಂಬಂಧವನ್ನು ಕಳೆದುಕೊಳ್ಳುತ್ತೀರಿ. ಜೋಸ್ ನಮ್ಮ ಕುಟುಂಬದ ಭಾಗವಾಗಿದ್ದರು. ಆದರೆ ಆ ನಿಯಮದಿಂದಾಗಿ ನಾವು ಅವರನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.