ಬೆಂಗಳೂರು, ಮಾ.18 (DaijiworldNews/AA): ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಫ್ರಾಂಚೈಸಿ ಅನ್ಬಾಕ್ಸ್ ಹೆಸರಿನಲ್ಲಿ ರಂಗೀನ್ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 17 ರಂದು ಅದ್ಧೂರಿಯಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಡಿಜೆ ಟಿಮ್ಮಿ ಟ್ರಂಪೆಟ್ ಮತ್ತು ಸ್ಥಳೀಯ ಕಲಾವಿದರು ಪ್ರದರ್ಶನ ನೀಡಿದರು. ಆದರೆ ಇತ್ತ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ವೀಕ್ಷಿಸುತ್ತಿದ್ದ ಅಭಿಮಾನಿಗಳು ಕಳಪೆ ಸ್ಟ್ರೀಮಿಂಗ್ನಿಂದಾಗಿ ಬೇಸರಗೊಂಡಿದ್ದಾರೆ.
99 ರೂ. ರಿಚಾರ್ಜ್ನೊಂದಿಗೆ ಆರ್ಸಿಬಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರಸ್ತುತಪಡಿಸಿತ್ತು. ಆದರೆ ಲೈವ್ ಸ್ಟ್ರೀಮಿಂಗ್ನಲ್ಲಿ ಬಫರಿಂಗ್, ವಿಳಂಬ ಕಂಡು ಬಂದಿದೆ. ಅಲ್ಲದೆ ಸ್ಟ್ರೀಮಿಂಗ್ ಗುಣಮಟ್ಟ ಸಹ ಕಳಪೆಯಿಂದ ಕೂಡಿತ್ತು ಎಂದು ಅಭಿಮಾನಿಗಳು ದೂರಿದ್ದಾರೆ.
ಇದೀಗ ಈ ಬಗ್ಗೆ ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 99 ರೂ. ಪಾವತಿಸಿದರೂ ಉತ್ತಮ ಸ್ಟ್ರೀಮಿಂಗ್ ವ್ಯವಸ್ಥೆ ಮಾಡದ ಆರ್ಸಿಬಿಯನ್ನು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಲೈವ್ ಸ್ಟ್ರೀಮಿಂಗ್ ವೇಳೆ ಬಫರಿಂಗ್ ಸಮಸ್ಯೆ ಎದುರಿಸಿದ್ದಾಗಿ ರಿಚಾರ್ಜ್ ಮೊತ್ತವನ್ನು ಹಿಂತಿರುಗಿಸುವಂತೆ ತಿಳಿಸಿದ್ದಾರೆ.