ಮ್ಯಾಂಚೆಸ್ಟರ್, ಜೂ 16 (Daijiworld News/SM): ಇಡೀ ವಿಶ್ವದ ಗಮನ ಸೆಳೆದಿದ್ದ ಭಾರತ-ಪಾಕ್ ವಿರುದ್ದದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಪದೇಪದೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಡಕ್ ವರ್ತ್ ಲೂಯೀಸ್ ನಿಯಮದ ಪ್ರಕಾರ ಪಂದ್ಯವನ್ನು ೪೦ ಓವರ್ ಗಳಿಗೆ ಸೀಮಿತಗೊಳಿಸಲಾಗಿತ್ತು.
ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಗೆದ್ದು ಬೀಗಿದ್ದು, ಕೋಟ್ಯಾಂತರ ಅಭಿಮಾನಿಗಳ ಆಶಯ ಕಡೆಗೂ ನೆರವೇರಿದೆ. ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ 89 ರನ್ಗಳ ಅಂತರದಲ್ಲಿ ಪಾಕಿಸ್ತಾನಕ್ಕೆ ಸೋಲಿನ ಕಹಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ ಪಾಕ್ಗೆ ಗೆಲ್ಲಲು ಬೃಹತ್ ಮೊತ್ತದ ಗುರಿ ನೀಡಿತು. ಗುರಿ ಬೆನ್ನತ್ತಿದ ಪಾಕ್, ಆರಂಭದಲ್ಲೇ ಆಘಾತಕ್ಕೊಳಗಾಯ್ತು. ಪಾಕ್ನ ಆರಂಭಿಕ ಆಟಗಾರರಾದ ಇಮಾಮ್ -ಉಲ್-ಹಕ್ ಹಾಗೂ ಫಖಾರ್ ಝಮಾನ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ತಮ್ಮ ಮೊದಲ ಎಸೆತದಲ್ಲೇ ವಿಜಯ್ ಶಂಕರ್, ಇಮಾಮ್ -ಉಲ್-ಹಕ್(7)ರನ್ನು ಎಲ್ಬಿಡ್ಲ್ಯೂ ಬಲೆಗೆ ಬೀಳಿಸಿದರು. ಬಳಿಕ ಒಂದರ ಮೇಲೊಂದರಂತೆ ಪಾಕ್ ಬ್ಯಾಟ್ಸ್ ಮನ್ ಗಳನ್ನು ಫೆವಿಲಿಯನ್ ಗೆ ಆಟ್ಟಿದರು.
ಈ ನಡುವೆ ಪದೇ ಪದೆ ಮಳೆ ಪಂದ್ಯಕ್ಕೆ ಅಡ್ಡಿಯಾಗುತ್ತಿತ್ತು. ಅಂತಿಮವಾಗಿ ಡಕ್ ವರ್ತ್ ಲೂಯೀಸ್ ನಿಯಮದಂತೆ ೪೦ ಓವರ್ ಗೆ ಪಂದ್ಯ ಸೀಮಿತಗೊಳಿಸಲಾಯಿತು. ಆದರೆ ಗುರಿಮುಟ್ಟಲು ವಿಫಲವಾದ ಪಾಕ್ ಭಾರತಕ್ಕೆ ಶರಣಾಯಿತು.