ಮುಂಬೈ, ಏ.16 (DaijiworldNews/AK): ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಿರಾಶಾದಾಯಕ ಪ್ರರ್ದಶನ ನೀಡಿದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ಕ್ರಮ ತೆಗೆದುಕೊಂಡಿದೆ.

ಸರಣಿಯ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಸಹಾಯಕ ಕೋಚ್ ಹಾಗೂ ಫೀಲ್ಡಿಂಗ್ ಕೋಚ್ ಸೇರಿ ನಾಲ್ವರು ಕೋಚಿಂಗ್ ಸಿಬ್ಬಂದಿಯನ್ನ ವಜಾಗೊಳಿಸಿದ್ದಾರೆ.
ಬ್ಯಾಟಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಮತ್ತು ಮಸಾಜರ್ ಸಿಬ್ಬಂದಿಯನ್ನ ಬಿಸಿಸಿಐ ತೆಗೆದುಹಾಕಿದೆ. ಇದರಲ್ಲಿ ಟೀಂ ಇಂಡಿಯಾದ ಮುಖ್ಯಕೋಚ್ ಗೌತಮ್ ಗಂಭೀರ್ ಅವರ ಆಪ್ತ ಅಭಿಷೇಕ್ ನಾಯರ್ ಅವರನ್ನೂ ವಜಾಗೊಳಿಸಿರುವುದು ಗಮನಾರ್ಹ ಸಂಗತಿ.
ಗಂಭೀರ್ ಕೋಲ್ಕತ್ತಾ ನೈಟ್ರೈಡರ್ಸ್ ಫ್ರಾಂಚೈಸಿಯಲ್ಲಿದ್ದಾಗಲೇ ನಾಯ್ ಆಪ್ತರಾಗಿದ್ದರು. ಗಂಭೀರ್ ಟೀಂ ಇಂಡಿಯಾ ಕೋಚ್ ಆದ ಬಳಿಕ ಸಹಾಯಕ, ಬ್ಯಾಟಿಂಗ್ ಕೋಚ್ ಆಗಿ ಅವರನ್ನ ನೇಮಕ ಮಾಡಿಕೊಳ್ಳಲಾಯಿತು. ಸದ್ಯ ಮುಂಬರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯೊಳಗೆ ಈ ಹುದ್ದೆಗೆ ಬೇರೆಯವರನ್ನು ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ.