ಬೆಂಗಳೂರು, ಏ.18(DaijiworldNews/TA): ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2025 ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಹಳೆಯ ಶೈಲಿಗೆ ಮರಳಿದ್ದಾರೆ ಎನ್ನಲಾಗಿದೆ. ಪುಲ್ ಶಾಟ್ ಮೂಲಕ ಎರಡು ಬೃಹತ್ ಸಿಕ್ಸರ್ಗಳನ್ನು ಬಾರಿಸಿದ್ದಾರೆ. ರೋಹಿತ್ ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್ಗಳೊಂದಿಗೆ 26 ರನ್ ಚಚ್ಚಿದರು. ಈ ಸಿಕ್ಸರ್ಗಳೊಂದಿಗೆ ರೋಹಿತ್ ಶರ್ಮಾ ಐಪಿಎಲ್ನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿದ್ದಾರೆ.
ರೋಹಿತ್ ಶರ್ಮಾ ಈಗ ವಾಂಖೆಡೆ ಕ್ರೀಡಾಂಗಣದಲ್ಲಿ ಒಟ್ಟು 100 ಸಿಕ್ಸರ್ಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ವಾಂಖೆಡೆಯಲ್ಲಿ 100 ಐಪಿಎಲ್ ಸಿಕ್ಸರ್ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್ಮನ್ ವಾಂಖೆಡೆ ಕ್ರೀಡಾಂಗಣದಲ್ಲಿ 100 ಸಿಕ್ಸರ್ಗಳನ್ನು ಸಿಡಿಸಿಲ್ಲ.
ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದವರ ಪಟ್ಟಿಯಲ್ಲಿ, ರೋಹಿತ್ 263 ಪಂದ್ಯಗಳಿಂದ 286 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದವರೆಂದರೆ ಕ್ರಿಸ್ ಗೇಲ್, ಕೇವಲ 142 ಪಂದ್ಯಗಳನ್ನು ಆಡಿದ್ದರೂ, ಟೂರ್ನಿಯಲ್ಲಿ 357 ಸಿಕ್ಸರ್ಗಳನ್ನು ಬಾರಿಸಿದ್ದಾರೆ.