ಚೆನ್ನೈ, ಮೇ. 03 (DaijiworldNews/AA): ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿಕೆ ನೀಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆ ಭಾರೀ ವೈರಲ್ ಆಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಯಾವುದೇ ಪೈಪೋಟಿಯಿಲ್ಲ. ಉಭಯ ತಂಡಗಳಿಂದ ಜಿದ್ದಾಜಿದ್ದಿನ ಕದನ ನಿರೀಕ್ಷೆಯನ್ನು ಸಹ ಮಾಡುವಂತಿಲ್ಲ. ಇಲ್ಲಿ ಆರ್ಸಿಬಿ ತಂಡವನ್ನು ಸಿಎಸ್ಕೆ ತಂಡದ ಸಾಂಪ್ರದಾಯಿಕ ಎದುರಾಳಿಯಾಗಿ ಬಿಂಬಿಸಲಾಗಿದೆ. ಆದರೆ ಅಂತಹದ್ದೇನು ಇಲ್ಲ. ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿಯೇ ಇಲ್ಲ. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಲವು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಗ್ಗು ಬಡಿದಿದೆ. ಅಲ್ಲದೆ ಆರ್ಸಿಬಿ ವಿರುದ್ಧ ಸಿಎಸ್ಕೆ ಮೇಲುಗೈ ಸಾಧಿಸುತ್ತಾ ಬಂದಿದೆ. ಹೀಗಾಗಿ ಆರ್ಸಿಬಿ, ಸಿಎಸ್ಕೆ ತಂಡದ ಸಾಂಪ್ರದಾಯಿಕ ಎದುರಾಳಿ ಎಂದು ನಾನಂತು ಭಾವಿಸುವುದಿಲ್ಲ ಎಂದಿದ್ದಾರೆ.
ನೀವು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದರಲ್ಲಿ ಅರ್ಥವಿದೆ. ಏಕೆಂದರೆ ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿ ಇದೆ. ಆದರೆ ಸಿಎಸ್ಕೆ ಮುಂದೆ ಆರ್ಸಿಬಿ ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.