ಬೆಂಗಳೂರು, ಮೇ. 04 (DaijiworldNews/TA):ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಾಕ್ ಎದುರಾಗಿದೆ. ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ಗೆ ಗಾಯವಾಗಿದೆ. ಇದೇ ಕಾರಣದಿಂದಾಗಿ ಅವರು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂದು ಹೇಳಲಾಗಿದೆ.

ಜೋಶ್ ಹ್ಯಾಝಲ್ವುಡ್ ಹೊರಗುಳಿಯಲು ಮುಖ್ಯ ಕಾರಣ ಭುಜದ ನೋವಿನ ಸಮಸ್ಯೆ. ಭುಜದ ನೋವಿನಿಂದ ಬಳಲುತ್ತಿರುವ ಹ್ಯಾಝಲ್ವುಡ್ಗೆ ಸಿಎಸ್ಕೆ ವಿರುದ್ಧದ ಪಂದ್ಯದ ವೇಳೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಲಾಗಿದೆ. ಇದಾಗ್ಯೂ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ನಿರ್ಣಾಯಕ ಪಂದ್ಯದಿಂದಲೂ ಹ್ಯಾಝಲ್ವುಡ್ ಹೊರಗುಳಿಯುವ ಸಾಧ್ಯತೆಯಿದೆ.
ಐಪಿಎಲ್ನಲ್ಲಿ ಆರ್ಸಿಬಿ ತಂಡವು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಜೋಶ್ ಹ್ಯಾಝಲ್ವುಡ್ ಕೊಡುಗೆ ಅಪಾರವಾದುದು. ಆಡಿರುವ 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಹ್ಯಾಝಲ್ವುಡ್ ಒಟ್ಟು 18 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ ನಿರ್ಣಾಯಕ ಹಂತದಲ್ಲಿ ಜೋಶ್ ಹ್ಯಾಝಲ್ವುಡ್ ಗಾಯಗೊಂಡಿರುವುದು ಆರ್ಸಿಬಿ ತಂಡಕ್ಕೆ ದೊಡ್ಡ ಚಿಂತೆಯಾಗಿದೆ.