ಬೆಂಗಳೂರು, ಮೇ. 11 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ನ 59ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅಲಭ್ಯವಾಗಲಿದ್ದಾರೆ ಎಂದು ಹೇಳಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ರಜತ್ ಪಾಟಿದಾರ್ ಅವರ ಬೆರಳಿಗೆ ಗಾಯವಾಗಿತ್ತು. ಈ ಹಿನ್ನೆಲೆ ವೈದ್ಯರು ಕೆಲ ದಿನಗಳವರೆಗೆ ರಜತ್ಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ.
ಭಾರತ ಹಾಗೂ ಪಾಕ್ ಉದ್ವಿಗ್ನತೆ ಹಿನ್ನೆಲೆ ಐಪಿಎಲ್ ಪಂದ್ಯಗಳನ್ನು ಬಿಸಿಸಿಐ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಒಂದು ವಾರದ ಬಳಿಕ ಐಪಿಎಲ್ ಅನ್ನು ಪುನರಾರಂಭಿಸಲು ಬಿಸಿಸಿಐ ನಿರ್ಧರಿಸಿದ್ದು, ಗುರುವಾರ ಅಥವಾ ಶುಕ್ರವಾರದಿಂದ ಟೂರ್ನಿ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ವೇಳೆಗೆ ರಜತ್ ಪಾಟಿದಾರ್ ಅವರ ಗಾಯವು ಸಂಪೂರ್ಣ ಗುಣವಾದರೆ ಮಾತ್ರ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಈ ಪಂದ್ಯಕ್ಕೆ ರಜತ್ ಪಾಟಿದಾರ್ ಅಲಭ್ಯರಾದರೆ ಆರ್ಸಿಬಿಯ ಜಿತೇಶ್ ಶರ್ಮಾ ಅವರು ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.