ಮುಂಬೈ, ಮೇ. 12 (DaijiworldNews/AA): ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ 14 ವರ್ಷಗಳ ಟೆಸ್ಟ್ ಕ್ರಿಕೆಟ್ ಜರ್ನಿಗೆ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾ ಖಾತೆಯಲ್ಲಿ ಭಾವುಕ ಪೋಸ್ಟ್ವೊಂದನ್ನ ಹಂಚಿಕೊಂಡಿರುವ ಅವರು, "ನಾನು ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪ್ರಯಾಣವು ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಅಂತ ಎಂದಿಗೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ನನಗೆ ಪಾಠಗಳನ್ನು ಕಲಿಸಿತು. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಸಂತೋಷದಿಂದ ನೋಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.
"ನಾನು ಈ ಸ್ವರೂಪದ ದೂರ ಸರಿಯುವುದು ಸುಲಭದ ಮಾತಲ್ಲ, ಆದ್ರೆ ಇದು ಸೂಕ್ತ ಸಮಯ. ಟೆಸ್ಟ್ ಗಾಗಿ ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಹಾಗಾಗಿ ನಿರೀಕ್ಷೆಗಿಂತ ಹೆಚ್ಚಿನದ್ದನ್ನು ಅದು ನನಗೆ ಹಿಂತಿರುಗಿಸಿದೆ. ನಾನು ಜನರಿಗಾಗಿ ಮೈದಾನಕ್ಕಿಳಿದಾಗ ದಾರಿಯುದ್ದಕ್ಕೂ ನನ್ನನ್ನು ನೋಡುವಂತೆ ಮಾಡಿದ ಪ್ರತಿಯೊಬ್ಬ ಅಭಿಮಾನಿಗಳು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಹೊರಡುತ್ತಿದ್ದೇನೆ" ಎಂದು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಅಧಿಕೃತವಾಗಿ ವಿದಾಯ ಘೋಷಿಸುವ ಮುನ್ನ, ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ಬಿಸಿಸಿಐ ಅವರ ಮನವೊಲಿಸಲು ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಬಿಸಿಸಿಐ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿಯೇ ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದನ್ನು ಅಧಿಕೃತಗೊಳಿಸಿದ್ದಾರೆ.
2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕೆರಿಯರ್ ಆರಂಭಿಸಿದರು. 2014 ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾದ ಬಳಿಕ ಕೊಹ್ಲಿ ಹಿಂತಿರುಗಿ ನೋಡಲೇ ಇಲ್ಲ. ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ 46.85 ಸರಾಸರಿಯಲ್ಲಿ 9,230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಕಿಂಗ್ ಕೊಹ್ಲಿ ನಾಯಕನಾಗಿ ಭಾರತ ಟೆಸ್ಟ್ ತಂಡವನ್ನು 68 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 40 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಕೇವಲ 17 ಮ್ಯಾಚ್ಗಳಲ್ಲಿ ಮಾತ್ರ ಸೋಲನುಭವಿಸಿದೆ. ಇನ್ನು 11 ಪಂದ್ಯಗಳಲ್ಲಿ ಭಾರತ ತಂಡವು ಡ್ರಾ ಸಾಧಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂದೆನಿಸಿಕೊಡಿದ್ದಾರೆ.
14 ವರ್ಷಗಳ ತಮ್ಮ ಟೆಸ್ಟ್ ಕ್ರಿಕೆಟ್ ಜರ್ನಿಗೆ ವಿದಾಯ ಹೇಳಿರುವ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ 2024 ರಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದ ಬೆನ್ನಲ್ಲೇ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಕೆಲದಿನಗಳ ಹಿಂದೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಇದೀಗ ಇದರ ಬೆನ್ನಲ್ಲೇ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.