ಮುಂಬೈ, ಮೇ. 15(DaijiworldNews/AK): ಐಪಿಎಲ್ 2025 ರ ಉಳಿದ 17 ಪಂದ್ಯಗಳು ಮೇ 17 ರ ಶನಿವಾರದಿಂದ ಪ್ರಾರಂಭವಾಗಲಿವೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಮೇ 9 ರಂದು ಬಿಸಿಸಿಐ ಪಂದ್ಯಾವಳಿಯನ್ನು ಮುಂದೂಡಿತು. ಈಗ ಪಂದ್ಯಾವಳಿ ಮತ್ತೆ ಪ್ರಾರಂಭವಾಗುತ್ತಿದೆ ಆದರೆ ಬಹುತೇಕ ಪ್ರತಿಯೊಂದು ತಂಡವು ವಿಭಿನ್ನ ಕಾರಣಗಳಿಂದಾಗಿ ಬದಲಾವಣೆಗಳನ್ನು ಮಾಡಬೇಕಾಗಿದೆ.

ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಯುವ ವೇಗಿ ಮಯಾಂಕ್ ಯಾದವ್ ಮತ್ತೆ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವುದರಿಂದ ಭಾರಿ ಹಿನ್ನಡೆ ಅನುಭವಿಸಿದೆ. ಇತ್ತೀಚೆಗಷ್ಟೇ ಇಂಜುರಿಯಿಂದ ಚೇತರಿಸಿಕೊಂಡಿದ್ದ ಮಯಾಂಕ್ ಐಪಿಎಲ್ಗೆ ಎಂಟ್ರಿಕೊಟ್ಟಿದ್ದರು. ಆದರೀಗ ಅವರು ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.
ಬಲಗೈ ವೇಗದ ಬೌಲರ್ ಮಯಾಂಕ್ ಯಾದವ್ ಬೆನ್ನುನೋವಿನಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಕಳೆದ ವರ್ಷವೂ ಅವರು ಕೇವಲ 4 ಪಂದ್ಯಗಳನ್ನು ಆಡಿದ ನಂತರ ಗಾಯಗೊಂಡಿದ್ದರು. ಈ ಕಾರಣದಿಂದಾಗಿ ಅವರು ಇಡೀ ಟೂರ್ನಿಯಿಂದ ಹೊರಗುಳಿದಿದ್ದರು.
ಈ ಬಾರಿಯ ಐಪಿಎಲ್ ಆರಂಭವಾಗಿ ಸುಮಾರು ಪಂದ್ಯಗಳು ಮುಗಿದ ಬಳಿಕ ಮಯಾಂಕ್ ಯಾದವ್ ಲಕ್ನೋ ತಂಡವನ್ನು ಸೇರಿಕೊಂಡಿದ್ದರು. ಅಷ್ಟರಲ್ಲಾಗಲೇ ಲಕ್ನೋ ತಂಡ 9 ಪಂದ್ಯಗಳನ್ನು ಆಡಿ ಮುಗಿಸಿತ್ತು. ಆ ಬಳಿಕ ತಂಡ ಸೇರಿಕೊಂಡಿದ್ದ ಮಯಾಂಕ್ ಕೇವಲ 2 ಪಂದ್ಯಗಳನ್ನು ಆಡಿದ ಬಳಿಕ ಮತ್ತೆ ಗಾಯಗೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಈಗ ಮಯಾಂಕ್ ಬದಲಿಗೆ ನ್ಯೂಜಿಲೆಂಡ್ನ ಯುವ ವೇಗಿ ವಿಲ್ ಒ'ರೂರ್ಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಓ'ರೂರ್ಕ್ ಈ ಸೀಸನ್ನ ಉಳಿದ ಪಂದ್ಯಗಳಿಗೆ 3 ಕೋಟಿ ರೂ. ವೇತನ ಪಡೆಯಲಿದ್ದಾರೆ. ಇದು ಕಿವೀಸ್ ವೇಗಿಗೆ ಮೊದಲ ಐಪಿಎಲ್ ಆಗಲಿದೆ.