ಬೆಂಗಳೂರು, ಮೇ. 16 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೇ 17 ರಿಂದ ಪುನರಾರಂಭಗೊಳ್ಳುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ನಡುವಿನ ಪಂದ್ಯದೊಂದಿಗೆ ಐಪಿಎಲ್ ಮತ್ತೆ ಪ್ರಾರಂಭವಾಗುತ್ತಿದೆ. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಎರಡೂ ತಂಡಗಳು ಈಗಾಗಲೇ ಬೆಂಗಳೂರಿಗೆ ಬಂದಿಳಿದಿದೆ.

ಗುರುವಾರ ಬೆಂಗಳೂರು ನಗರದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಭಾರೀ ಮಳೆಯಿಂದಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನೀರಿನಿಂದ ತುಂಬಿತ್ತು. ಮೈದಾನದಲ್ಲಿ ತುಂಬಿದ್ದ ಮಳೆ ನೀರಿನಲ್ಲಿ ಆರ್ಸಿಬಿಯ ಬ್ಯಾಟ್ಸ್ಮನ್ ಟಿಮ್ ಡೇವಿಡ್ ಈಜುತ್ತಿರುವುದು ಕಂಡುಬಂದಿದೆ. ಸದ್ಯ ಮಳೆಯ ನಡುವೆಯೂ ಟಿಮ್ ಡೇವಿಡ್ ಮೈದಾನದಲ್ಲಿ ಮೋಜು ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಟಿಮ್ ಡೇವಿಡ್ ಮೈದಾನದಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಈಜುತ್ತಿರುವುದು, ಸ್ವಿಮ್ ಮಾಡಿ ಆರ್ಸಿಬಿ ಡ್ರೆಸ್ಸಿಂಗ್ ರೂಮ್ಗೆ ಬಂದಾಗ ತಂಡದ ಉಳಿದ ಆಟಗಾರರು ಅವರನ್ನು ಜೋರಾಗಿ ನಗುತ್ತಾ, ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.