ಮುಂಬೈ, ಜೂ. 06 (DaijiworldNews/AA): ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

ಶುಕ್ರವಾರದಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿವೃತ್ತಿಯ ಬಗ್ಗೆ ತಿಳಿಸಿರುವ ಅವರು, ಸುದೀರ್ಘ ಪೊಸ್ಟ್ ಹಂಚಿಕೊಂಡಿದ್ದಾರೆ. ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿರುವುದಾಗಿ ತಿಳಿಸಿದ ಅವರು, 'ಎರಡು ದಶಕಗಳ ಕಾಲ ಮೈದಾನದಲ್ಲಿ ಕಳೆದ ನಂತರ, ಈ ಸುಂದರ ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ' ಎಂದು ಚಾವ್ಲಾ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
2007 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಟಿ 20 ವಿಶ್ವಕಪ್ ಗೆದ್ದಾಗ, ಪಿಯೂಷ್ ಚಾವ್ಲಾ ಭಾರತ ತಂಡದಲ್ಲಿದ್ದರು. ಆ ವೇಳೆ ಅವರಿಗೆ ಒಂದೇ ಒಂದು ಪಂದ್ಯ ಆಡಲು ಅವಕಾಶ ದೊರೆಯಲಿಲ್ಲ. ಆ ಬಳಿಕ 2010ರಲ್ಲಿ ಚೊಚ್ಚಲ ಟಿ೨೦ ಪಂದ್ಯವನ್ನಾಡಿದ ಅವರು, 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ತಂಡದ ಪರ 3 ಪಂದ್ಯಗಳನ್ನು ಆಡಿದ್ದ ಚಾವ್ಲಾ ೪ ವಿಕೆಟ್ಗಳನ್ನು ಪಡೆದರಾದರೂ ಅವರಿಗೆ ಫೈನಲ್ನಲ್ಲಿ ಆಡಲೂ ಅವಕಾಶ ದೊರೆಯಲಿಲ್ಲ.
ಇನ್ನು ಐಪಿಎಲ್ ನಲ್ಲಿ ಮೊದಲ ಸೀಸನ್ನಿಂದಲೇ ಲೀಗ್ನ ಭಾಗವಾಗಿದ್ದರು. ಪಂಜಾಬ್ ಕಿಂಗ್ಸ್ನೊಂದಿಗೆ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ ಚಾವ್ಲಾ, ಆ ನಂತರ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಪರವಾಗಿ ಆಟವಾಡಿದ್ದರು. 2014 ರ ಐಪಿಎಲ್ನಲ್ಲಿ ಕೋಲ್ಕತ್ತಾ ತಂಡವವನ್ನು ಚಾಂಪಿಯನ್ ಮಾಡುವಲ್ಲಿ ಚಾವ್ಲಾ ಅವರು ಪ್ರಮುಖ ಪಾತ್ರ ವಹಿಸಿದ್ದರು.