ನವದೆಹಲಿ, ಜೂ. 21 (DaijiworldNews/AA): ಪ್ಯಾರಿಸ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಜರ್ಮನಿಯ ಚಾಂಪಿಯನ್ ಜಾವೆಲಿನ್ ಎಸೆತಗಾರ ಜೂಲಿಯನ್ ವೆಬರ್ ಅವರನ್ನು ಹಿಂದಿಕ್ಕಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

2023 ರಲ್ಲಿ ಲಾಸೆನ್ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್ನಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು 2 ವರ್ಷಗಳ ಬಳಿಕ ಡೈಮಂಡ್ ಲೀಗ್ನಲ್ಲಿ ಗೆದ್ದ ಮೊದಲ ಪ್ರಶಸ್ತಿಯೂ ಆಗಿದೆ.
ನೀರಜ್ ಚೋಪ್ರಾ ಕೈ ಹಿಡಿದ ಮೊದಲ ಎಸೆತ
ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ, 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ನಂತರದ ಪ್ರಯತ್ನಗಳಲ್ಲಿ 85.10 ಮೀಟರ್ ಎಸೆದರು. ಮೂರು ಬಾರಿ ಫೌಲ್ ಮಾಡಿಕೊಂಡರು. ಕೊನೆಯ ಪ್ರಯತ್ನದಲ್ಲಿ 82.89 ಮೀಟರ್ ಎಸೆದರು. ಈ ಮೂಲಕ ನೀರಜ್ ಚೋಪ್ರಾ ಅವರ ಮೊದಲ ಎಸೆತವೇ ಅವರನ್ನು ಗೆಲ್ಲಿಸಿತು.
ಇನ್ನು ಡೈಮಂಡ್ ಲೀಗ್ನಲ್ಲಿ ಜೂಲಿಯನ್ ವೆಬರ್ 87.88 ಮೀಟರ್ ಎಸೆದು 2ನೇ ಸ್ಥಾನ ಪಡೆದರು. ಬ್ರೆಜಿಲ್ನ ಲೂಯಿಸ್ ಮೌರಿಸಿಯೊ ಡಾ ಸಿಲ್ವಾ 86.62 ಮೀಟರ್ ಎಸೆದು 3ನೇ ಸ್ಥಾನ ಗಳಿಸಿದರು.
ವಿಶೇಷ ಎಂದರೆ ನೀರಜ್ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು 8 ವರ್ಷಗಳ ಬಳಿಕ. ಅಂದರೆ ಕೊನೆಯ ಬಾರಿ ಅವರು ಪ್ಯಾರಿಸ್ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದರು. ಇದಾದ ಎಂಟು ವರ್ಷಗಳ ಬಳಿಕ ಪ್ಯಾರಿಸ್ ಡೈಮಂಡ್ ಲೀಗ್ಗೆ ಮರಳಿದ ನೀರಜ್ ಚೋಪ್ರಾ ಅವರು 88.16 ಮೀಟರ್ ದೂರ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ನೀರಜ್ ಚೋಪ್ರಾ 2025ರ ಮೊದಲ ಪ್ರಶಸ್ತಿಯಾಗಿದೆ.