ಮುಂಬೈ, ಜೂ. 27(DaijiworldNews/AK) :ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ ಐಸಿಸಿ ತನ್ನ ಹಳೆಯ ನಿಯಮಗಳಲ್ಲಿ ಬದಲಾವಣೆಗಳನ್ನು ತರುವುದರೊಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಐಸಿಸಿ ಇದೀಗ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳ ಪವರ್ಪ್ಲೇ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಹೊಸ ಬದಲಾವಣೆಯ ಪ್ರಕಾರ, ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಇನ್ನಿಂಗ್ಸ್ನ ಓವರ್ಗಳನ್ನು ಕಡಿಮೆ ಮಾಡಿದರೆ, ಪವರ್ಪ್ಲೇ ಓವರ್ಗಳನ್ನು ಓವರ್ಗಳ ಬದಲಿಗೆ ಚೆಂಡುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, 20 ಓವರ್ಗಳ ಇನ್ನಿಂಗ್ಸ್ನಲ್ಲಿ ಮೊದಲ 6 ಓವರ್ಗಳು ಪವರ್ಪ್ಲೇ ಆಗಿದ್ದವು. ಈ 6 ಓವರ್ಗಳಲ್ಲಿ ಫೀಲ್ಡಿಂಗ್ ಮಾಡುತ್ತಿರುವ ತಂಡವು 30 ಯಾರ್ಡ್ ವೃತ್ತದ ಹೊರಗೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್ಗಳನ್ನು ಇರಿಸುವಂತಿಲ್ಲ. ಆ ಬಳಿಕ ಅಂದರೆ 6 ಓವರ್ ಮುಗಿದ ನಂತರ ಉಳಿದ ಓವರ್ಗಳಲ್ಲಿ, 30 ಯಾರ್ಡ್ ವೃತ್ತದ ಹೊರಗೆ ಐದು ಫೀಲ್ಡರ್ಗಳನ್ನು ನಿಲ್ಲಿಸಬಹುದು.
ಆದರೆ ಇದೀಗ ಐಸಿಸಿ ತಂದಿರುವ ಹೊಸ ನಿಯಮದ ಪ್ರಕಾರ, ಒಂದು ಇನ್ನಿಂಗ್ಸ್ 5 ಓವರ್ಗಳಾಗಿದ್ದರೆ, ಅಂದರೆ ಮಳೆ ಅಥವಾ ಇನ್ನಿತ್ತರ ಕಾರಣದಿಂದ ಉಭಯ ತಂಡಗಳಿಗೆ ಕೇವಲ 5 ಓವರ್ಗಳನ್ನು ನಿಗದಿಪಡಿಸಿದರೆ, ಆಗ ಪವರ್ಪ್ಲೇ 1.3 ಓವರ್ಗಳಾಗಿರುತ್ತದೆ. ಅಂದರೆ ಈ 9 ಎಸೆತಗಳಲ್ಲಿ ಕೇವಲ ಇಬ್ಬರು ಫೀಲ್ಡರ್ಗಳು ಮಾತ್ರ 30 ಯಾರ್ಡ್ ಸರ್ಕಲ್ನಿಂದ ಹೊರಗೆ ನಿಲ್ಲಬೇಕು.
ಹಾಗೆಯೇ ಪಂದ್ಯ 6 ಓವರ್ಗಳ ಇನ್ನಿಂಗ್ಸ್ನದ್ದಾಗಿದ್ದರೆ, ಪವರ್ಪ್ಲೇ 1.5 ಓವರ್ಗಳಾಗಿರುತ್ತದೆ. 10 ಓವರ್ಗಳದ್ದಾಗಿದ್ದರೆ, ಪವರ್ಪ್ಲೇ 3 ಓವರ್ಗಳಾಗಿರುತ್ತದೆ. ಒಂದು ವೇಳೆ ಪಂದ್ಯವು 19 ಓವರ್ಗಳಾಗಿದ್ದರೆ, ಪವರ್ಪ್ಲೇ 5.4 ಓವರ್ಗಳಾಗಿರುತ್ತದೆ. ಈಗಾಗಲೇ ಟಿ20 ಬ್ಲಾಸ್ಟ್ ಪಂದ್ಯಾವಳಿಯಲ್ಲಿ ಈ ನಿಯಮವನ್ನು ಜಾರಿಗೆ ತಂದಿದ್ದು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ನಿಯಮವನ್ನು ಜುಲೈ 2 ರಿಂದ ಜಾರಿಗೆ ತರಲಾಗುವುದು.