ನವದೆಹಲಿ, ಜೂ. 29 (DaijiworldNews/TA): ಟೀಮ್ ಇಂಡಿಯಾದ ಬ್ಯಾಟ್ಸ್ಮನ್ ಸ್ಮೃತಿ ಮಂಧಾನ ಶನಿವಾರ ಟೆಸ್ಟ್, ಏಕದಿನ ಮತ್ತು ಟಿ20ಐ ಎಂಬ ಮೂರು ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನ ಮೂರು ಸ್ವರೂಪಗಳಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಕ್ರಿಕೆಟಿಗರಾದರು. ಟ್ರೆಂಟ್ ಬ್ರಿಡ್ಜ್ನಲ್ಲಿ ಭಾರತ ಮಹಿಳಾ ತಂಡ ಮತ್ತು ಇಂಗ್ಲೆಂಡ್ ಮಹಿಳಾ ತಂಡದ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಮಂಧಾನ ಕೇವಲ 62 ಎಸೆತಗಳಲ್ಲಿ 112 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು.

ನಾಯಕಿಯಾಗಿ ಆಯ್ಕೆಯಾದ ಮಂಧಾನ 15 ಬೌಂಡರಿಗಳು ಮತ್ತು ಮೂರು ಅಮೋಘ ಸಿಕ್ಸರ್ಗಳನ್ನು ಒಳಗೊಂಡ ಪ್ರಬಲ ಪ್ರದರ್ಶನದೊಂದಿಗೆ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರು. ಮಂಧಾನ ಅವರ ಈ ಮೈಲಿಗಲ್ಲು ಅವರ ಚೊಚ್ಚಲ T20I ಶತಕವೂ ಆಗಿದ್ದು, ಇದುವರೆಗೆ ಯಾವುದೇ ಭಾರತೀಯ ಮಹಿಳಾ ಬ್ಯಾಟ್ಸ್ಮನ್ ಮಾಡದ ಅಪರೂಪದ ಸಾಧನೆಯನ್ನು ಪೂರ್ಣಗೊಳಿಸಿದರು.
ಆಂಗ್ಲ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಟೀಮ್ ಇಂಡಿಯಾ ನಾಯಕಿ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳನ್ನು ಬಾರಿಸಿದರು. ಈ ಮೂಲಕ 62 ಎಸೆತಗಳಲ್ಲಿ 15 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 112 ರನ್ ಕಲೆಹಾಕಿದ್ದಾರೆ. ಈ ಶತಕದೊಂದಿಗೆ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲೂ (ಟೆಸ್ಟ್, ಏಕದಿನ, ಟಿ20) ಶತಕ ಬಾರಿಸಿದ ಏಕೈಕ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ಸ್ಮೃತಿ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾ ಪರ ಮಹಿಳಾ ಕ್ರಿಕೆಟ್ನಲ್ಲಿ ಟಿ20 ಶತಕ ಸಿಡಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೂಡ ಮಂಧಾನ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ನಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನೂ ಸಹ ಸ್ಮೃತಿ ಮಂಧಾನ ಬಾಚಿಕೊಂಡಿದ್ದಾರೆ. ಮಹಿಳಾ ಟಿ20 ಇನಿಂಗ್ಸ್ನಲ್ಲಿ ಬೌಂಡರಿಗಳ ಮೂಲಕ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಸಹ ಸ್ಮೃತಿ ಮಂಧಾನ ಸೃಷ್ಟಿಸಿದ್ದಾರೆ.