ಮುಂಬೈ, ಜು. 02 (DaijiworldNews/AK):ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಕೊನೆಗೂ ದಿನಾಂಕ ನಿಗದಿ ಆಗಿದೆ. ಯುಎಇನಲ್ಲಿ ಸೆಪ್ಟೆಂಬರ್ 5 ರಿಂದ ಟೂರ್ನಿ ಆರಂಭವಾಗಲಿದ್ದು, ಸೆ.7 ರಂದು ಭಾರತ ಮತ್ತು ಪಾಕ್ ನಡುವಿನ ಪಂದ್ಯ ನಡೆಯಲಿದೆ.

ಸೆ.21 ರಂದು ಫೈನಲ್ ಪಂದ್ಯ ನಡೆಯಲಿದೆ. 17 ದಿನಗಳ ಟೂರ್ನಿಯ ವೇಳಾಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ರಾಷ್ಟ್ರಗಳು ತಮ್ಮ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಯುಎಇ ಟೂರ್ನಿಯಲ್ಲಿ ಭಾಗವಹಿಸಲಿವೆ. ಗುಂಪುಹಂತ ಮತ್ತು ಸೂಪರ್ ಫೋರ್ ವಿಧಾನದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಪಹಲ್ಗಾಮ್ ಘಟನೆ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದು ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಇತ್ತು. ಈ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಂಘರ್ಷದ ಬಳಿಕ ಬಹುರಾಷ್ಟ್ರ ಟೂರ್ನಿಯಲ್ಲಿ ಎರಡೂ ದೇಶಗಳು ಭಾಗವಹಿಸುತ್ತಿರುವುದು ಇದೇ ಮೊದಲು.