ಜೈಪುರ, ಜು. 25 (DaijiworldNews/AA): ಅಪ್ರಾಪ್ತೆಯ ಮೇಲೆ 2 ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಸ್ಟಾರ್ ವೇಗಿ ಯಶ್ ದಯಾಳ್ಗೆ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಗಾಜಿಯಾಬಾದ್ನ ಯುವತಿಯೊಬ್ಬಳು ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಮೇಲೆ ಯಶ್ ದಯಾಳ್ ವಿರುದ್ಧ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಭಾವನಾತ್ಮಕವಾಗಿ ನನ್ನನ್ನ ಕಟ್ಟಿಹಾಕಿ, ಕ್ರಿಕೆಟ್ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾನೆ. ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಲಹೆ ನೀಡುವುದಾಗಿ, ಉತ್ತಮ ಭವಿಷ್ಯ ಕಲ್ಪಿಸುವುದಾಗಿ ಹೇಳಿದ್ದ ದಯಾಳ್ ಜೈಪುರದ ಸೀತಾಪುರ ಹೋಟೆಲ್ಗೆ ಕರೆದಿದ್ದ. ಅಲ್ಲಿ ಮೊದಲ ಬಾರಿಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣ ನಡೆದಾಗ ನನಗೆ 17 ವರ್ಷ ವಯಸ್ಸಾಗಿತ್ತು. ಅಲ್ಲಿಂದ 2 ವರ್ಷಗಳ ಕಾಲ ಪದೇ ಪದೇ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಈ ಹಿನ್ನೆಲೆ ಯಶ್ ದಯಾಳ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಈ ನಡುವೆ ಅಲಹಾಬಾದ್ ಹೈಕೋರ್ಟ್ ದಯಾಳ್ ಬಂಧನಕ್ಕೆ ತಡೆ ನೀಡಿತ್ತು. ಇದಾದ ಕೆಲ ದಿನಗಳಲ್ಲೇ ಪೋಕ್ಸೋ ಪ್ರಕರಣ ದಾಖಲಾಗಿದೆ.