ಮ್ಯಾಂಚೆಸ್ಟರ್, ಜು. 27 (DaijiworldNews/AA): ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆಯನ್ನು ಶುಭ್ಮನ್ ಗಿಲ್ ಮುರಿದಿದ್ದಾರೆ. ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಗಿಲ್ ಗಿಲ್ ಅಜೇಯ 78 ರನ್ ಕಲೆಹಾಕಿದ್ದಾರೆ. ಈ ಮೂಲಕ ಶುಭ್ಮನ್ ಗಿಲ್ ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂದೆನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಕಿಂಗ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕೊಹ್ಲಿ 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 692 ರನ್ ಗಳಿಸಿ ಈ ಭರ್ಜರಿ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಇದೀಗ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲೇ ಶುಭ್ಮನ್ ಗಿಲ್ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ಈ ಮೂಲಕ ಕೊಹ್ಲಿಯ 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಸದ್ಯ ಇಂಗ್ಲೆಂಡ್ ಸರಣಿಯಲ್ಲಿ ಶುಭ್ಮನ್ ಗಿಲ್ ಈವರೆಗೆ 697 ರನ್ ಗಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಸರಣಿವೊಂದರಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಆಂಗ್ಲರ ನಾಡಿನಲ್ಲಿ ಸರಣಿವೊಂದರಲ್ಲಿ ಅತ್ಯಧಿಕ ರನ್ಗಳಿಸಿದ ಏಷ್ಯನ್ ಬ್ಯಾಟರ್ ಎನಿಸಿಕೊಂಡಿದ್ದಾರೆ.