ಬಾಗಲಕೋಟೆ, ಆ. 06 (DaijiworldNews/TA): ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ್ ಎಂಬ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ರಿಷಭ್ ಪಂತ್ ಆರ್ಥಿಕ ನೆರವು ನೀಡಿ ಮಾನವೀಯತೆಯ ನಿಜವಾದ ಮಾದರಿಯಾಗಿ ಹೊರಹೊಮ್ಮಿದ್ದಾರೆ.

ಪಿಯುಸಿಯಲ್ಲಿ ಶೇಕಡಾ 83 ಅಂಕಗಳಿಸಿ ಉತ್ತೀರ್ಣಳಾದ ಜ್ಯೋತಿ, ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದರೂ, ಬಡತನ ಮತ್ತು ಆರ್ಥಿಕ ಸಮಸ್ಯೆಗಳ ಕಾರಣ ತಮ್ಮ ಕನಸು ನನಸು ಮಾಡಿಕೊಳ್ಳಲು ಬಹಳಷ್ಟು ಸವಾಲುಗಳನ್ನು ಎದುರಿಸುತ್ತಿದ್ದರು. ಅವರ ತಂದೆ ತೀರ್ಥಯ್ಯ ಗ್ರಾಮದಲ್ಲಿ ಸಣ್ಣ ಚಹಾ ಅಂಗಡಿ ನಡೆಸುತ್ತಿದ್ದು, ಆ ಕೊಂಚ ಆದಾಯದಲ್ಲಿ ಕುಟುಂಬ ನಿರ್ವಹಿಸುವುದೂ ಕಷ್ಟಕರವಾಗಿತ್ತು.
ಈ ಸಮಯದಲ್ಲಿ ಗ್ರಾಮದ ಗುತ್ತಿಗೆದಾರ ಅನಿಲ್ ಹುಣಶಿಕಟ್ಟಿ ಅವರು ಜ್ಯೋತಿಗೆ ಜಮಖಂಡಿ ಬಿಎಲ್ಡಿಇ ಸಂಸ್ಥೆಯ ಕಾಲೇಜಿನಲ್ಲಿ ಬಿಸಿಎ ಪ್ರವೇಶ ಸೀಟ್ ಸಿಗುವಂತೆ ಸಹಾಯ ಮಾಡಿದರು. ಜೊತೆಗೆ ಆರ್ಥಿಕ ನೆರವು ಒದಗಿಸುವ ಕುರಿತು ಭರವಸೆ ನೀಡಿದರು. ಅನಿಲ್ ಅವರು ರಿಷಭ್ ಪಂತ್ ಅವರ ಆತ್ಮೀಯರಾಗಿರುವ ಕಾರಣ, ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದರು. ವಿಷಯ ತಿಳಿದ ರಿಷಭ್ ಪಂತ್ ತಕ್ಷಣವೇ ಸ್ಪಂದಿಸಿ, ಜುಲೈ 17 ರಂದು ಜ್ಯೋತಿಯ ಮೊದಲ ಸೆಮಿಸ್ಟರ್ ಫೀಸ್ ರೂಪಾಯಿಗಳು 40,000 ನೇರವಾಗಿ ಬಿಎಲ್ಡಿಇ ಕಾಲೇಜಿನ ಖಾತೆಗೆ ವರ್ಗಾಯಿಸಿದರು.
ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ, ಪುಟ್ಟ ಗ್ರಾಮದಿಂದ ಹೊರಬಂದ ಸಾಧಕಿಯ ಕನಸು ನೆರವೇರಿಸಲು ಈ ಮಟ್ಟದ ಸಹಾಯ ಮಾಡಿದ ರಿಷಭ್ ಪಂತ್ ಅವರ ಮಾನವೀಯತೆ ಎಲ್ಲೆಡೆ ಮೆಚ್ಚುಗೆ ಪಡೆದಿದೆ. ಸಾರ್ವಜನಿಕರು ಅವರ ಸಾರ್ಥಕ ಕಾರ್ಯವನ್ನು ಶ್ಲಾಘಿಸುತ್ತಿದ್ದು, ಜ್ಯೋತಿಯ ತಂದೆ ತೀರ್ಥಯ್ಯ “ಪಂತ್ ಅವರಿಗೆ ದೇವರು ಆಯುಸ್ಸು, ಆರೋಗ್ಯ, ಸಂತೋಷ ನೀಡಲಿ. ಇನ್ನೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಶಕ್ತಿ ದೊರೆಯಲಿ” ಎಂದು ಭಾವಭರಿತವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.