ಮುಂಬೈ, ಆ. 08 (DaijiworldNews/AA): 2024 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸದ್ಯ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್ ದಾಖಲೆಯ ಪ್ರದರ್ಶನ ನೀಡಿರಲಿಲ್ಲ. ಇದರಿಂದ ಅಶ್ವಿನ್ಗೆ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇದೀಗ ಮುಂದಿನ ಆವೃತ್ತಿಗೂ ಮುನ್ನವೇ ಅಶ್ವಿನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಅಲ್ಲದೆ ಅಶ್ವಿನ್, ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ಬಳಿ ತನ್ನನ್ನು ತಂಡದಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಂದು ವೇಳೆ ಆರ್ ಅಶ್ವಿನ್ ಸಿಎಸ್ಕೆ ತಂಡದಿಂದ ಬಿಡುಗಡೆಯಾದರೆ, ಅವರು ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶ್ವಿನ್ ಚೆನ್ನೈ ತಂಡವನ್ನು ತೊರೆಯಲು ಕಾರಣವೇನು ಎಂಬುದು ಇದುವರೆಗೆ ತಿಳಿದಿಲ್ಲ. ಆದರೆ ಅಶ್ವಿನ್ ಹರಾಜಿಗೆ ಹೋಗಲು ಬಯಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಆವೃತ್ತಿಯಲ್ಲಿ ಅಶ್ವಿನ್ಗೆ 9 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಾಯಿತು. ಆದರೆ ಈ ಪಂದ್ಯಗಳಲ್ಲಿ ಅಶ್ವಿನ್ ಪ್ರದರ್ಶನ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಈ ಪಂದ್ಯಗಳಲ್ಲಿ ಅಶ್ವಿನ್ ಕೇವಲ 7 ವಿಕೆಟ್ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಇದರ ಜೊತೆಗೆ ಅಶ್ವಿನ್ ಪ್ರತಿ ಓವರ್ಗೆ 9.13 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು. ಅವರು 10 ವರ್ಷಗಳ ನಂತರ ಸಿಎಸ್ಕೆ ತಂಡಕ್ಕೆ ಮರಳಿದ್ದರು. ಅಶ್ವಿನ್ ಅವರನ್ನು ಪ್ರಾಂಚೈಸಿ 9.75 ಕೋಟಿ ರೂ.ಗಳಿಗೆ ಖರೀದಿ ಮಾಡಿತ್ತು.