ಮುಂಬೈ, ಆ. 09 (DaijiworldNews/AK): ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡವು ಮುಂಬರುವ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಗೆ 20 ಆಟಗಾರರ ತಂಡವನ್ನು ಅಧಿಕೃತವಾಗಿ ಘೋಷಿಸಿದ್ದು, ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಕರುಣ್ ನಾಯರ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಕರುಣ್ ನಾಯರ್ ಗಾಯಾಳುವಾಗಿರುವದರಿಂದ, ಪ್ರಾರಂಭದ ಕೆಲವು ಮ್ಯಾಚ್ ಗಳಲ್ಲಿ ಹಂಗಾಮಿ ನಾಯಕನಾಗಿ ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ.

ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಲ್ಲಿ ದೊಡ್ಡ ಹೆಸರಾಗಿರುವ ಕರುಣ್ ನಾಯರ್ ಅವರು ಮೈಸೂರು ವಾರಿಯರ್ಸ್ ತಂಡವನ್ನು ಈ ಬಾರಿಯೂ ಗೆಲುವಿನೆಡೆಗೆ ಕರೆದೊಯ್ಯುವ ನಿರೀಕ್ಷೆ ಇದೆ. ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿರುವ ಮತ್ತು ಟಿ20 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕರುಣ್ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಿದ್ದಾರೆ.
ಮಹಾರಾಜ ಟ್ರೋಫಿ 2025 ಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಖ್ಯಾತ ಕ್ರಿಕೆಟಿಗರಾದ ಪ್ರಸಿದ್ಧ್ ಎಂ ಕೃಷ್ಣ, ಮನೀಷ್ ಪಾಂಡೆ ಮತ್ತು ಗೌತಮ್ ಕೆ ಅವರು ಆಡಲಿದ್ದಾರೆ. ಮಹಾರಾಜ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 11 ರಿಂದ 27ರವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದ್ದು, ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಪರಸ್ಪರ ಸೆಣೆಸಲಿವೆ.