ಬೆಂಗಳೂರು, ಆ. 15 (DaijiworldNews/TA): ಓವಲ್ ಟೆಸ್ಟ್ ಪಂದ್ಯದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಅದೊಂದು ಫೋಟೋ, ಕರುಣ್ ಇನ್ನೇನು ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬಹುದು ಎಂಬ ವದಂತಿಗಳನ್ನು ಎಬ್ಬಿಸಿತ್ತು. ಈಗ ನಾಯರ್ ಈ ಬಗ್ಗೆ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಭಾರತ–ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ತಂಡ ಸರಣಿಯನ್ನು 2-2ರಿಂದ ಸಮಬಲಗೊಳಿಸಿದರೂ, ಕರ್ನಾಟಕದ ಬ್ಯಾಟ್ಸ್ಮನ್ ಕರುಣ್ ನಾಯರ್ಗಾಗಿ ಇದು ಸವಾಲಿನ ಕಾಲವಾಯ್ತು. 8 ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೂ, ನಿರೀಕ್ಷಿತ ಪ್ರದರ್ಶನ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಐದನೇ ಟೆಸ್ಟ್ ಓವಲ್ನಲ್ಲಿ ನಡೆದಾಗ, ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ ನಾಯರ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರೂ, ಎರಡನೇ ಇನ್ನಿಂಗ್ಸ್ನಲ್ಲಿ ಮಿಂಚಲಾಗಲಿಲ್ಲ. ಈ ಪ್ರದರ್ಶನದ ನಡುವೆಯೇ, ಅವರ ಭವಿಷ್ಯದ ಕುರಿತು ಪ್ರಶ್ನೆಗಳು ಎದ್ದವು. ಇನ್ನೂ ವಿಶೇಷವೆಂದರೆ, ಓವಲ್ ಟೆಸ್ಟ್ ವೇಳೆ ಡ್ರೆಸ್ಸಿಂಗ್ ರೂಮ್ನಿಂದ ವೈರಲ್ ಆದ ಫೋಟೋ ಒಂದು, ಎಲ್ಲರ ಗಮನ ಸೆಳೆಯಿತು.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಫೋಟೋದಲ್ಲಿ ಕರುಣ್ ನಾಯರ್ ಡ್ರೆಸ್ಸಿಂಗ್ ರೂಮ್ ಬಾಲ್ಕನಿಯಲ್ಲಿ ಅಳುತ್ತಿರುವಂತೆ ತೋರಿಸಲಾಯಿತು. ಅವರ ಮಿತ್ರಿ ಕೆಎಲ್ ರಾಹುಲ್ ಸಮಾಧಾನಪಡಿಸುತ್ತಿರುವ ದೃಶ್ಯವೂ ಸಹವಿದೆ. ಇದನ್ನು ಹಲವರು ಭಾವನಾತ್ಮಕವಾಗಿ ಶೇರ್ ಮಾಡಿಕೊಂಡಿದ್ದರು. ಆದರೆ ಈಗ ನಾಯರ್ ಈ ಬಗ್ಗೆ ಮೌನ ಮುರಿದಿದ್ದಾರೆ.
“ಅದು ನಿಜವಾದ ಫೋಟೋ ಅಲ್ಲ. ನಾನು ನಂಬುವಂತೆ ಅದು AI ರಚಿತ ಚಿತ್ರ ಅಥವಾ ವಿಡಿಯೋ. ನಾವು ಖಂಡಿತವಾಗಿಯೂ ಬಾಲ್ಕನಿಯಲ್ಲಿ ಕುಳಿತಿದ್ದೆವು, ಆದರೆ ವೈರಲ್ ಆಗಿರುವ ಚಿತ್ರ ನಕಲಿ ಚಿತ್ರ,” ಎಂದು ನಾಯರ್ ಸ್ಪಷ್ಟಪಡಿಸಿದ್ದಾರೆ. ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಜೊತೆಗಿನ ಸಂಬಂಧವನ್ನು ಮೆಚ್ಚಿದ ನಾಯರ್, “ಕೊನೆಯ ಎರಡು ತಿಂಗಳುಗಳಲ್ಲಿ ನಾವು ತುಂಬಾ ಒಳ್ಳೆಯ ಸಮಯ ಕಳೆಯುತ್ತಿದ್ದೆವು. ಕ್ರಿಕೆಟ್ ಮಾತ್ರವಲ್ಲದೇ ಇತರ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದೆವು. ಸರಣಿ ಚೆನ್ನಾಗಿ ಮುಕ್ತಾಯವಾಯಿತೆಂಬುದಕ್ಕೆ ನನಗೆ ಖುಷಿಯಿದೆ ” ಎಂದು ಹೇಳಿದರು.