ಮುಂಬೈ, ಆ. 22 (DaijiworldNews/AK): 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿದೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಲೀಗ್ ಹಂತದ ಹಾಗೂ ಸೆಮಿಫೈನಲ್ ಪಂದ್ಯಗಳನ್ನು ನವಿ ಮುಂಬೈನಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ.

ಐಸಿಸಿ ನಿರ್ಧಾರಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾಗಿದ್ದ ಕಾಲ್ತುಳಿತ ದುರಂತವೇ ಪ್ರಮುಖ ಕಾರಣ ಎನ್ನಬಹುದು. ಇದರಿಂದಾಗಿ ವಿಶ್ವಕಪ್ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬದಲು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮಹಿಳಾ ವಿಶ್ವಕಪ್ನ ಹೊಸ ವೇಳಾಪಟ್ಟಿಯ ಪ್ರಕಾರ, ಐದು ಪಂದ್ಯಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ ಮೂರು ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಸೇರಿವೆ. ಪಾಕಿಸ್ತಾನ ಫೈನಲ್ ತಲುಪದಿದ್ದರೆ, ಪಂದ್ಯಾವಳಿಯ ಫೈನಲ್ ಕೂಡ ಈ ಕ್ರೀಡಾಂಗಣದಲ್ಲಿ ನಡೆಯಲಿದೆ. ನವಿ ಮುಂಬೈ ಜೊತೆಗೆ, ವಿಶ್ವಕಪ್ ಪಂದ್ಯಗಳನ್ನು ಎಸಿಎ ಕ್ರೀಡಾಂಗಣ (ಗುವಾಹಟಿ), ಹೋಳ್ಕರ್ ಕ್ರೀಡಾಂಗಣ (ಇಂದೋರ್), ಎಸಿಎ-ವಿಡಿಸಿಎ ಕ್ರೀಡಾಂಗಣ (ವಿಶಾಖಪಟ್ಟಣ) ಮತ್ತು ಆರ್. ಪ್ರೇಮದಾಸ ಕ್ರೀಡಾಂಗಣ (ಕೊಲಂಬೊ, ಶ್ರೀಲಂಕಾ) ಗಳಲ್ಲಿಯೂ ನಡೆಸಲಾಗುವುದು.
ಹಳೆಯ ವೇಳಾಪಟ್ಟಿಯ ಪ್ರಕಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಸೆಪ್ಟೆಂಬರ್ 30 ರಂದು ಬೆಂಗಳೂರಿನ ಮೈದಾನದಲ್ಲಿ ನಡೆಯಬೇಕಿತ್ತು. ಈಗ ಅದು ಗುವಾಹಟಿ ಮೈದಾನದಲ್ಲಿ ನಡೆಯಲಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಅಕ್ಟೋಬರ್ 3 ರಂದು ಬೆಂಗಳೂರಿನಲ್ಲಿ ನಡೆಯಬೇಕಿತ್ತು, ಈಗ ಅದು ಗುವಾಹಟಿಯಲ್ಲಿ ನಡೆಯಲಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಅಕ್ಟೋಬರ್ 20 ರಂದು ಕೊಲಂಬೊ ಮೈದಾನದಲ್ಲಿ ನಡೆಯಬೇಕಿತ್ತು, ಈಗ ಅದು ನವಿ ಮುಂಬೈ ಮೈದಾನದಲ್ಲಿ ನಡೆಯಲಿದೆ. ಇವುಗಳು ಮಾತ್ರವಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್ (ಅಕ್ಟೋಬರ್ 23) ಮತ್ತು ಭಾರತ ಹಾಗೂ ಬಾಂಗ್ಲಾದೇಶ (ಅಕ್ಟೋಬರ್ 26) ನಡುವಿನ ಲೀಗ್ ಪಂದ್ಯಗಳು ಕೂಡ ನವಿ ಮುಂಬೈ ಮೈದಾನದಲ್ಲಿ ನಡೆಯಲಿವೆ.