ಮುಂಬೈ, ಆ. 23 (DaijiworldNews/AK): 2025ರ ಟಿ20 ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾದ ಶ್ರೇಯಸ್ ಅಯ್ಯರ್ ಅವರನ್ನ ಟೀಂ ಇಂಡಿಯಾದ ಒನ್ಡೇ ಕ್ಯಾಪ್ಟನ್ ಆಗಿ ಮಾಡಲಾಗುತ್ತದೆ ಅನ್ನೋ ವದಂತಿಗೆ ಬಿಸಿಸಿಐ ತೆರೆ ಎಳೆದಿದೆ.

ಏಷ್ಯಾಕಪ್ ಟೂರ್ನಿಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡದ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕ್ರಿಕೆಟ್ ತಜ್ಞರು ವ್ಯಾಪಕ ಟೀಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ಒಂದು ದಿನದ ಹಿಂದಷ್ಟೇ ಅಯ್ಯರ್ ಅವರ ಬಗ್ಗೆ ಪ್ರತ್ಯೇಕ ಲೆಕ್ಕಾಚಾರ ಹಾಕಿದ್ದು, ಮಹತ್ತರ ಜವಾಬ್ದಾರಿ ನೀಡಲು ಚಿಂತನೆ ನಡೆಸುತ್ತಿದೆ ಎಂಬ ವದಂತಿ ಹಬ್ಬಿತ್ತು.
ಬಿಸಿಸಿಐ ಶ್ರೇಯಸ್ ಅಯ್ಯರ್ ಅವರಿಗೆ ಏಕದಿನ ತಂಡದ ನಾಯಕತ್ವ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈಗಾಗಲೇ 38 ವರ್ಷ ವಯಸ್ಸಿನ ರೋಹಿತ್ ಶರ್ಮಾ ಅವರು 2027ರ ವಿಶ್ವಕಪ್ ವರೆಗೆ ಲಭಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಹೀಗಾಗಿ ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಏಷ್ಯಾಕಪ್ ಮುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಲಿದ್ದು, ಅಯ್ಯರ್ ಅವರೇ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿತ್ತು.
ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, ನಾಯಕನ ಆಯ್ಕೆ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.