ನವದೆಹಲಿ, ಆ. 24 (DaijiworldNews/AA): ಭಾರತದ 93 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹಲವು ತಂಡಗಳನ್ನು ಎದುರಿಸಿದೆ. ಆದರೆ ಇದೇ ಮೊದಲ ಬಾರಿಗೆ ಏಷ್ಯಾದ ತಂಡವೊಂದರ ವಿರುದ್ಧ ಭಾರತ ಕಣಕ್ಕಿಳಿಯಲಿದೆ.

ಭಾರತ ಕ್ರಿಕೆಟ್ ತಂಡವು ಇದೇ ಮೊದಲ ಬಾರಿಗೆ ಒಮಾನ್ ವಿರುದ್ಧ ಕಣಕ್ಕಿಳಿಯಲಿದೆ. ಅಂದರೆ ಕಳೆದ 93 ವರ್ಷಗಳಲ್ಲಿ ಒಮಾನ್ ತಂಡವು ಒಮ್ಮೆಯೂ ಟೀಮ್ ಇಂಡಿಯಾ ವಿರುದ್ಧ ಆಡಿರಲಿಲ್ಲ. ಆದರೆ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಒಮಾನ್ ತಂಡವು ಅರ್ಹತೆ ಪಡೆದುಕೊಂಡಿದ್ದು, ಭಾರತದ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ.
ಅದರಂತೆ ಏಷ್ಯಾಕಪ್ 2025ರ ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಒಮಾನ್ ತಂಡವನ್ನು ಎದುರಿಸಲಿದೆ. ಈ ಮೂಲಕ 2014 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಒಮಾನ್ ತಂಡವು ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ತಂಡವನ್ನು ಎದುರಿಸಲಿದೆ.
ಇನ್ನು ಏಷ್ಯಾಕಪ್ನಲ್ಲಿ ಸೆಪ್ಟೆಂಬರ್ 10ರಂದು ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಈ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ 2025 ರಲ್ಲಿ ಶುಭಾರಂಭ ಮಾಡಲಿದೆ.
ಸೆಪ್ಟೆಂಬರ್ 14ರಂದು ಟೀಮ್ ಇಂಡಿಯಾ ತನ್ನ ಎರಡನೇ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲಿದೆ. ಇಂಡೋ-ಪಾಕ್ ನಡುವಿನ ಈ ಪಂದ್ಯವು ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸೆಪ್ಟೆಂಬರ್ 19ರಂದು ಭಾರತ ತಂಡವು ತನ್ನ ಮೂರನೇ ಎದುರಾಳಿ ಒಮಾನ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಅಬುಧಾಬಿಯಲ್ಲಿ ಜರುಗಲಿದ್ದು, ಟೀಮ್ ಇಂಡಿಯಾ ಗೆಲ್ಲುವ ನಿರೀಕ್ಷೆಯಿದೆ. ಈ ಮೂರು ಪಂದ್ಯಗಳಲ್ಲಿ ಭಾರತ ತಂಡವು 2 ಜಯ ಸಾಧಿಸಿದರೆ ಸೂಪರ್-4 ಹಂತಕ್ಕೇರಲಿದೆ.