ಮುಂಬೈ, ಆ. 24 (DaijiworldNews/AA): ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆಗೆ ದ್ವಿಪಕ್ಷೀಯ ಸರಣಿಯನ್ನಾಡುವುದಿಲ್ಲ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಇಂಡೋ ಪಾಕ್ ಸರಣಿ, ಬಿಸಿಸಿಐಗೆ ಕ್ರೀಡಾ ಮಸೂದೆ ಅನ್ವಯವಾಗುವ ವಿಷಯಗಳನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಅವರು, "ಭಾರತ-ಪಾಕ್ ಪಂದ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ. ಅಂತಾರಾಷ್ಟ್ರೀಯ ಸರಣಿಗಳಲ್ಲಿ ಮಾತ್ರವೇ ಆಡಲಾಗುತ್ತಿದೆ. ಏಕೆಂದ್ರೆ ಐಸಿಸಿ ನಿಯಮವನ್ನು ಗೌರವಿಸಬೇಕು" ಎಂದು ಹೇಳಿದರು.
"ಕ್ರೀಡಾ ಮಸೂದೆ ಅಡಿಯಲ್ಲಿ ವೀಸಾಗಳನ್ನು ಸಕಾಲಿಕವಾಗಿ ನೀಡುವುದು ಮೂಲ ನಿಯಮವಾಗಿದೆ. ಹಾಗಾಗಿ ಯಾವುದೇ ದೇಶವು ಮತ್ತೊಂದು ರಾಷ್ಟ್ರದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೇ ವಿಶ್ವ ದರ್ಜೆಯ, ಎಲ್ಲಾ ಸೌಲಭ್ಯಗಳೊಂದಿಗೆ ಭಾರತವನ್ನ ಜಾಗತಿಕ ಕ್ರೀಡಾ ಕೇಂದ್ರವಾಗಿ ಸ್ಥಾಪಿಸುವುದು, ಇತರ ರಾಷ್ಟ್ರಗಳು ದೇಶದಲ್ಲಿ ಟೂರ್ನಿ ಆಯೋಜಿಸಲು ಪ್ರೋತ್ಸಾಹಿಸುವುದು ಸರ್ಕಾರ ಗುರಿಯಾಗಿದೆ" ಎಂದರು.
ಮುಂದುವರೆದು ಕ್ರೀಡಾ ಮಸೂದೆ ಕುರಿತು ಮಾತನಾಡಿದ ಅವರು, "ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ಹೊಸದಾಗಿ ಪರಿಚಯಿಸಲಾದ ಕ್ರೀಡಾ ಮಸೂದೆಯು ಐತಿಹಾಸಿಕ ಮತ್ತು ಪರಿವರ್ತನಾತ್ಮಕ ಶಾಸನವಾಗಿದೆ. 1985 ರಿಂದ ಇಂತಹ ಮಸೂದೆಗೆ ಕರಡು ಅಸ್ತಿತ್ವದಲ್ಲಿದ್ದರೂ, ಇದು ಶಾಸನ ಆಗಿರಲಿಲ್ಲ. ಭಾರತವು ಮುಂದೆ ಒಲಿಂಪಿಕ್ಸ್ಗೆ ಬಿಡ್ ಮಾಡ್ತಿರೋದ್ರಿಂದ ಈ ಮಸೂದೆ ಐತಿಹಾಸಿಕ ಕೂಡ ಆಗಿದೆ" ಎಂದು ನುಡಿದರು.
ಅಲ್ಲದೇ, ಹೊಸ ಕ್ರೀಡಾ ಮಸೂದೆ ಅಡಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೇರಿದಂತೆ ಎಲ್ಲಾ ಕ್ರೀಡಾ ಒಕ್ಕೂಟಗಳು ಹೊಸ ಕ್ರೀಡಾ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದ ಅವರು, ಭವಿಷ್ಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಅನ್ನು ಹೊಸ ಕ್ರೀಡಾ ಮಂಡಳಿಯಲ್ಲಿ ವಿಲೀನಗೊಳಿಸುವ ಯೋಜನೆಯನ್ನು ಪ್ರಸ್ತಾಪಿಸಿದರು.