ಕಾರ್ಕಳ, ಆ. 25 (DaijiworldNews/AA): ಕಾರ್ಕಳದ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ಅವರು ಅಂಡರ್-15 ಬಾಲಕಿಯರ ವಿಭಾಗದಲ್ಲಿ ಭಾರತದ ಸ್ಕೂಲ್ ಗೇಮ್ಸ್ ಫೆಡರೇಶನ್ ರಾಷ್ಟ್ರೀಯ ವಾಲಿಬಾಲ್ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ಕೇವಲ ಎಂಟು ಆಟಗಾರ್ತಿಯರು ಆಯ್ಕೆಯಾಗಿದ್ದಾರೆ. ಶಗುನ್ ಅವರು ಉಡುಪಿ ಜಿಲ್ಲೆಯಿಂದ ರಾಜ್ಯ ತಂಡದಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಭಾರತವನ್ನು ಪ್ರತಿನಿಧಿಸುವ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ರಾಷ್ಟ್ರೀಯ ತಂಡವು ಚೀನಾದ ಶಾಂಗ್ಲುವೊದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದೆ.
ಶಗುನ್ ಅವರು ಕಲ್ಲೊಟ್ಟೆ ನಿವಾಸಿಗಳಾದ ಸಂದೇಶ್ ವರ್ಮ ಮತ್ತು ಶೃತಿರಾಜ್ ದಂಪತಿಯ ಪುತ್ರಿಯಾಗಿದ್ದಾರೆ.