ಚೆನ್ನೈ, ಆ. 27 (DaijiworldNews/AA): ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಅಶ್ವಿನ್ ಇದೀಗ ಐಪಿಎಲ್ಗೆ ವಿದಾಯ ಹೇಳಿದ್ದಾರೆ.

ಐಪಿಎಲ್ಗೆ ನಿವೃತ್ತಿ ಘೋಷಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭ ಇರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಕೊನೆಗೊಳ್ಳುತ್ತದೆ, ಆದರೆ ವಿವಿಧ ಲೀಗ್ಗಳ ಸುತ್ತಲಿನ ಆಟದ ಅನ್ವೇಷಣೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಈವರೆಗಿನ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಅಶ್ವಿನ್ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಅವಧಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ.
ಅಶ್ವಿನ್ ಅವರು ಐಪಿಎಲ್ನಲ್ಲಿ ಈವರೆಗೆ 221 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 4710 ಎಸೆತಗಳನ್ನು ಎಸೆದಿರುವ ಅವರು ಒಟ್ಟು 187 ವಿಕೆಟ್ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್ ಮೂಲಕ 833 ರನ್ಗಳ ಕೊಡುಗೆ ನೀಡಿದ್ದಾರೆ. ಇದೀಗ 17 ವರ್ಷಗಳ ತಮ್ಮ ಸುದೀರ್ಘ ಐಪಿಎಲ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.